

ಕಾರವಾರ: ಜಿಲ್ಲೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ತೆರಳಲು 4,600 ಕ್ಕೂ ಅಧಿಕ ಕಾರ್ವಿುಕರು ಸಿದ್ಧರಾಗಿದ್ದು, ನೋಂದಣಿಯಲ್ಲಿ ತೊಡಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ, ಸೀಬರ್ಡ್ ಸೇರಿ ದೊಡ್ಡ ಕಾಮಗಾರಿಗಳು, ಪಾನಿ ಪುರಿಯಂತಹ ಸಣ್ಣಪುಟ್ಟ ಉದ್ಯೋಗ ಮಾಡಿಕೊಂಡಿರುವ 4,394 ಜನರು ಈಗಾಗಲೇ ತಮ್ಮ ಊರಿಗೆ ತೆರಳಲು ಹೆಸರು ನೋಂದಾಯಿಸಿದ್ದು, ಈಗಾಗಲೇ 260 ಜನ ತೆರಳಿದ್ದಾರೆ. ಇನ್ನೂ ಕೆಲವರು ನೋಂದಾಯಿಸುತ್ತಿದ್ದಾರೆ.
ಶನಿವಾರ ಇಲ್ಲಿನ ಕಾರ್ವಿುಕ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಹುಬ್ಬಳ್ಳಿವರೆಗೆ ತೆರಳುವ ಬಸ್ ಶುಲ್ಕ ಹಾಗೂ ಅಲ್ಲಿಂದ ಸ್ವಂತ ರಾಜ್ಯಕ್ಕೆ ತೆರಳುವ ರೈಲು ಟಿಕೆಟ್ ಶುಲ್ಕ ಪಡೆಯಲಾಯಿತು. ನೂರಾರು ಜನರು ರಸ್ತೆಯ ಪಕ್ಕ ಸರದಿಯಲ್ಲಿ ನಿಂತು ಹಣ ಸಂದಾಯ ಮಾಡಿದರು. ಮೇ 18 ರಂದು ಹುಬ್ಬಳ್ಳಿಯಿಂದ ಉತ್ತರಪ್ರದೇಶಕ್ಕೆ,19 ರಂದು ಜಾರ್ಖಂಡಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ.
ಉತ್ತರ ಪ್ರದೇಶಕ್ಕೆ ತೆರಳಲು 2668, ಬಿಹಾರಕ್ಕೆ 1040, ಜಾರ್ಖಂಡಕ್ಕೆ 486, ಜನರು ಸೇವಾ ಸಿಂಧು ಆಪ್ನಲ್ಲಿ ಹೆಸರು ನೋಂದಾಯಿಸಿದ್ದಾರೆ. ಈಗಾಗಲೇ ರಾಜಸ್ಥಾನಕ್ಕೆ 260 ಜನರು ತೆರಳಿದ್ದಾರೆ.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಕಚೇರಿ ಸೇರಿ ಎಲ್ಲಡೆ ಸೇವಾ ಸಿಂಧು ಆಪ್ನಲ್ಲಿ ಕಾರ್ವಿುಕರಿಗೆ ಹೆಸರು ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನೋಡಲ್ ಅಧಿಕಾರಿ ಪುರುಷೋತ್ತಮ ತಿಳಿಸಿದ್ದಾರೆ.