ಜಿಲ್ಲೆಯಲ್ಲಿ ೪,೫೯,೯೧೬ ಮತದಾರರು ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ: ವೆಂಕಟ್ ರಾಜಾ

MDK07
Published on

ಮಡಿಕೇರಿ: ಜಿಲ್ಲೆಯಲ್ಲಿ ೪,೫೯,೯೧೬ ಮತದಾರರು ಹೆಸರು ಸೇರ್ಪಡೆಯಾಗಿದ್ದು, ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಡಿಕೇರಿ-೨೦೮ ಮತ್ತು ವಿರಾಜಪೇಟೆ-೨೦೯ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.


ಈಗಾಗಲೇ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮನೆ ಮನೆ ಸಮೀಕ್ಷೆ ಮಾಡಿ ಕರಡು ಮತದಾರರ ಪಟ್ಟಿಯನ್ನು ತಯಾರಿಸಲಾಗಿದೆ. ೨೦೨೪ರ ಜ.೫ ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತಿದ್ದು, ಅದರೊಳಗೆ ಈ ಕರಡು ಮತದಾರರ ಪಟ್ಟಿಯನ್ನು ಗಮನಿಸಿ ಸರಿಪಡಿಸಿಕೊಳ್ಳಲು ಅವಕಾಶ ಇದೆ. ೧೮ ವರ್ಷ ಪೂರ್ಣಗೊಂಡವರ ಹೆಸರು ಬಿಟ್ಟು ಹೋಗಿದ್ದಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ವೆಂಕಟ್ ರಾಜಾ ಕೋರಿದರು.


ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯ ೫೪೬ ಮತಗಟ್ಟೆಯಲ್ಲಿ ೨,೨೬,೩೯೨ ಪುರುಷ ಮತದಾರರು, ೨,೩೩,೫೦೩ ಮಹಿಳಾ ಮತದಾರರು ಹಾಗೂ ೨೧ ಇತರ ಮತದಾರರು, ಒಟ್ಟು ೪,೫೯,೯೧೬ ಮತದಾರರು ಇದ್ದಾರೆ. ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಮತಗಟ್ಟೆಯಲ್ಲಿ ೧,೧೪,೨೯೪ ಪುರುಷ ಮತದಾರರು, ೧,೧೯,೪೬೪ ಮಹಿಳಾ ಮತದಾರರು ಹಾಗೂ ೧೦ ಇತರ ಮತದಾರರು ಒಟ್ಟು ೨,೩೩,೭೬೮ ಮತದಾರರು ಇದ್ದಾರೆ.


ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೩ ಮತಗಟ್ಟೆಯಲ್ಲಿ ೧,೧೨,೦೯೮ ಪುರುಷ ಮತದಾರರು, ೧,೧೪,೦೩೯ ಮಹಿಳಾ ಮತದಾರರು, ೧೧ ಇತರ ಮತದಾರರು ಒಟ್ಟು ೨,೨೬,೧೪೮ ಮತದಾರರು ಇದ್ದಾರೆ. ಒಟ್ಟಾರೆ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದೆ ಮತದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net