

ಬೆಂಗಳೂರು: ಮಹಾನಗರದಲ್ಲಿ ಉಂಟಾಗಿರುವ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವ ಬೆನ್ನಲ್ಲೇ ಹೆಚ್ಚು ವಾಹನ ಸಂಚಾರ ಇರುವ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಶೀಘ್ರದಲ್ಲೇ ಡಾಂಬರೀಕರಣ ಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಪ್ರಸ್ತುತ ನಗರದ ಪ್ರಮುಖ ರಸ್ತೆಗಳಲ್ಲಿದ್ದ ಗುಂಡಿಗಳನ್ನು ಬಹುತೇಕ ಮುಚ್ಚಲಾಗಿದೆ. ಆದರೂ, ಅಲ್ಲಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಸೂಚನೆ ಅನ್ವಯ 459 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು 660 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಆಹ್ವಾನಿಸಲಾಗುವುದು. ಆಕ್ಟೋಬರ್ ವೇಳೆಗೆ ಡಾಂಬರೀಕರಣ ಕೈಗೊಂಡು ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.
8 ಸಾವಿರ ಗುಂಡಿಗಳಿಗೆ ಮುಕ್ತಿ:
ಪಾಲಿಕೆಯ ಎಂಟೂ ವಲಯಗಳಲ್ಲಿ ಇತ್ತೀಚಿಗೆ ಆರಂಭಿಸಿದ್ದ ರಸ್ತೆಗುಂಡಿ ಮುಚ್ಚುವ ಕಾರ್ಯದಲ್ಲಿ 8 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದ ಸ್ಥಳಗಳಲ್ಲಿ 6 ಸಾವಿರ ಸಂಖ್ಯೆಯಷ್ಟು ಮೇಲ್ಪದರದ ಡಾಂಬರು ಹಾಕಲಾಗಿದೆ. ಜತೆಗೆ ಅಸಂಖ್ಯ ಸಣ್ಣ ಗುಂಡಿಗಳನ್ನು ಮುಚ್ಚಿದ್ದು, ‘ಗಮನ’ ಆ್ಯಪ್ ಮುಲಕ ನಾಗರಿಕರು ಸಲ್ಲಿಸುವ ದೂರು ಆಧರಿಸಿ ಮುಂದಿನಗಳಲ್ಲೂ ಗುಂಡಿಗಳನ್ನು ಮುಚ್ಚಲು ಪಾಲಿಕೆ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
ಮಹದೇವಪುರ ವಲಯಕ್ಕೆ ಆದ್ಯತೆ:
ಐಟಿ ಕಾರಿಡಾರ್ ಹೊಂದಿರುವ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆಗಳು ಹೆಚ್ಚು ದುಸ್ಥಿತಿಯಲ್ಲಿವೆ. ಕಡಿಮೆ ಪ್ರಮಾಣದ ರಸ್ತೆಗಳಿದ್ದರೂ ಅತಿ ಹೆಚ್ಚು ವಾಹನಗಳ ಸಂಚಾರದಿಂದ ಇಲ್ಲಿನ ರಸ್ತೆಗಳು ಹಾಳಾಗಿವೆ. ರಸ್ತೆಗುಂಡಿ ಮುಚ್ಚಿದರೂ ಮತ್ತೆ ಗುಂಡಿಗಳು ಉಂಟಾಗುತ್ತಿರುವ ಬಗ್ಗೆ ಟೆಕ್ಕಿಗಳು ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಮಹದೇವಪುರ ವಲಯದಲ್ಲಿ ಹೆಚ್ಚಿನ ಸಂಖ್ಯೆ ರಸ್ತೆಗಳನ್ನು (124 ಕಿ.ಮೀ.) ಡಾಂಬರೀಕರಣ ಮಾಡಲು ಪಾಲಿಕೆ ತೀರ್ಮಾನಿಸಿದೆ.
ವಲಯವಾರು ಆರ್ಟಿರಿಯಲ್ ರಸ್ತೆ ಟೆಂಡರ್ ವಿವರ:
ವಲಯದ ಹೆಸರು ಉದ್ದ (ಕಿಮೀ) ಮೊತ್ತ (ಕೋಟಿ ರೂ.)
ಪೂರ್ವ 57.65 64.50
ಪಶ್ಚಿಮ 32.82 29.01
ದಕ್ಷಿಣ 29.50 44.25
ಯಲಹಂಕ 47.33 71.20
ಕೆ.ಆರ್.ಪುರ 39.67 55.50
ಮಹದೇವಪುರ 124.00 180.00
ಬೊಮ್ಮನಹಳ್ಳಿ 44.23 56.00
ಆರ್.ಆರ್.ನಗರ 59.45 129.25
ದಾಸರಹಳ್ಳಿ 24.60 30.00
ಒಟ್ಟು 459.25 659.71