

ಮೈಸೂರು: ನಗರದಲ್ಲಿ ಅನಧಿಕೃತ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ 450 ಚೀಲ ಯೂರಿಯಾ ರಸಗೊಬ್ಬರವನ್ನು ಗುರುವಾರ ರಾತ್ರಿ ವಶ ಪಡಿಸಿಕೊಳ್ಳಲಾಗಿದೆ.
ಮೇಟಗಳ್ಳಿಯ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಹಿಂಭಾಗದಲ್ಲಿರುವ ಮೈಸೂರು ವಿಷನ್ ಮಲ್ಟಿಫ್ಲೇಕ್ಸ್ ಸಿನಿಮಾಮಂದಿರದ ಬಳಿ ಇರುವ ಗೋದಾಮಿನಲ್ಲಿ ಇದನ್ನು ಅನಧಿಕೃತವಾಗಿ ಸಂಗ್ರಹಿಸಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಕೃಷಿ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ದಾಳಿ ಮಾಡಿದ್ದಾರೆ.
‘ಇದು ನಕಲಿ ರಸಗೊಬ್ಬರವಲ್ಲ. ಅಸಲಿ ರಸಗೊಬ್ಬರವೇ. ಆದರೆ, ಅನಧಿಕೃತ ಗೋದಾಮಿನಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಇದು ಅಗತ್ಯ ವಸ್ತುಗಳ ಕಾಯ್ದೆಯ ಉಲ್ಲಂಘನೆಯಾಗಿದೆ. ಮೊದಲೇ ತಿಳಿಸಿದ ಅಧಿಕೃತ ಗೋದಾಮಿನಲ್ಲೇ ರಸಗೊಬ್ಬರವನ್ನು ದಾಸ್ತಾನು ಮಾಡಬೇಕು. ಇಲ್ಲಿ ನಿಯಮ ಮೀರಲಾಗಿದೆ. ಹೀಗಾಗಿ, ದಾಳಿ ಮಾಡಿ ರಸಗೊಬ್ಬರವನ್ನು ವಶ ಪಡಿಸಿಕೊಳ್ಳಲಾಗಿದೆ’ ಎಂದು ಡಾ.ಬಿ.ಎಸ್. ಚಂದ್ರಶೇಖರ್ ವಿಜಯವಾಣಿ ತಿಳಿಸಿದ್ದಾರೆ.
‘ದಾಳಿ ಮಾಡಿದ ಸಂದರ್ಭದಲ್ಲಿ ಯಾರು ಇರಲಿಲ್ಲ. ಗೋದಾಮಿನ ಮಾಲೀಕರು ಯಾರು? ರಸಗೊಬ್ಬರ ಇಲ್ಲಿ ಏಕೆ ಸಂಗ್ರಹಿಸಲಾಗಿತ್ತು. ಎಲ್ಲಿಗೆ ಪೂರೈಕೆ ಮಾಡಲು ಮುಂದಾಗಿದ್ದರು’ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.