

ಮದ್ದೂರು: ಶಿವಪುರದ ಪ್ರತಿಯೊಂದು ಕುಟುಂಬಕ್ಕೆ ಆರೋಗ್ಯ ಭಾಗ್ಯ ನೀಡುವ ಸಲುವಾಗಿ ಶಿವಪುರವನ್ನು ಕುಟುಂಬ ದತ್ತು ಯೋಜನೆಯಡಿ ದತ್ತು ತೆಗೆದುಕೊಂಡಿರುವುದಾಗಿ ಶ್ರೀ ಚಾಮುಂಡೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲ ಜಿ.ಯು. ಪ್ರವೀಣ್ ಹೇಳಿದರು.
ಶಿವಪುರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಉಚಿತವಾಗಿ ದಾಖಲಾತಿ, ವಾರ್ಡ್, ನರ್ಸಿಂಗ್, ವೈದ್ಯರ ಚಾರ್ಜ್ ಸೇರಿದಂತೆ ಕೆಲವು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಔಷಧಗಳಿಗೆ ಮಾತ್ರ ಹಣ ಪಡೆಯುತ್ತೇನೆ ಎಂದರು.
ಬಿಪಿಎಲ್, ಯಶಸ್ವಿನಿ, ಸುವರ್ಣ ಆರೋಗ್ಯದಡಿ ಔಷಧ ಸೇರಿದಂತೆ ಪ್ರತಿಯೊಂದು ಉಚಿತವಾಗಿರುತ್ತದೆ. ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಉಚಿತವಾಗಿರುತ್ತದೆ. ಸಿಟಿ ಸ್ಕ್ಯಾನಿಂಗ್ ದರ ಬೇರೆ ಕಡೆ ನಾಲ್ಕರಿಂದ ಐದು ಸಾವಿರ ರೂ. ಇರುತ್ತವೆ ಆದರೆ ನಮ್ಮಲ್ಲಿ 1 ಸಾವಿರ ರೂ. ಮಾತ್ರ ತೆಗೆದುಕೊಳ್ಳುತ್ತೇವೆ ಎಂದರು.
ಶಿವಪುರದ ಜನ ಆಸ್ಪತ್ರೆಯ ಸೇವೆ ಪಡೆದುಕೊಳ್ಳಬೇಕು. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ, ನಮ್ಮ ಆಸ್ಪತ್ರೆಯನ್ನು ನಿಮ್ಮ ಆಸ್ಪತ್ರೆ ಎಂದು ತಿಳಿದುಕೊಂಡು ಪ್ರತಿಯೊಂದು ಸವಲತ್ತುಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶೀತಲ್ ಮಾತನಾಡಿ, ಕುಟುಂಬ ದತ್ತು ಯೋಜನೆಯಡಿ 150 ವೈದ್ಯ ವಿದ್ಯಾರ್ಥಿಗಳು ಪ್ರತಿ ವಿದ್ಯಾರ್ಥಿಗೆ 3 ಕುಟುಂಬದಂತೆ 450 ಕುಟುಂಬಗಳಿಗೆ ಪ್ರತಿ ತಿಂಗಳು ನಾಲ್ಕನೇ ಶನಿವಾರ ಭೇಟಿ ನೀಡಿ ರೋಗಿಗಳ ವಿವರ ಪಡೆದು ಪರೀಕ್ಷೆ ಮಾಡಿ ತೊಂದರೆ ಇದೆ ಎಂದು ಕಂಡುಬಂದಲ್ಲಿ ಚಿಕಿತ್ಸೆ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ನಿರಂತರವಾಗಿ 3 ವರ್ಷಗಳ ಕಾಲ ತಪಾಸಣೆ ಮಾಡುತ್ತಾರೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ರವೀಂದ್ರ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯ ಶಿವಪುರವನ್ನು ದತ್ತು ತೆಗೆದುಕೊಂಡಿರುವುದು ಸಂತೋಷದ ವಿಷಯ. ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಯೊಂದು ಮನೆಗಳ ರೋಗಿಗಳ ವಿವರವನ್ನು ಪಡೆದು ಆಗಾಗ್ಗೆ ಪರಿಶೀಲಿಸುತ್ತಿರಬೇಕು ಎಂದು ಸಲಹೆ ನೀಡಿದರು.
ಶ್ರೀ ಚಾಮುಂಡೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಿಂದ ಆಗಮಿಸಿದ್ದ ಗಣ್ಯರಿಗೆ ತೆಂಗಿನ ಸಸಿಯನ್ನು ಶಿವಪುರದ ಗ್ರಾಮಸ್ಥರು ವಿತರಣೆ ಮಾಡಿದರು.
ಸೂರ್ಯೋದಯ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಸುರೇಶ್, ಸಮಾಜ ಸೇವಕ ಕೆ.ಎಂ.ರವಿಕುಮಾರ್, ಪುರಸಭಾ ಸದಸ್ಯ ಲತಾರಾಮು, ಮುಖಂಡ ಶಿವಕುಮಾರ್ ಇದ್ದರು.