45 ರೌಡಿಶೀಟರ್‌ಗಳ ಗಡಿಪಾರು

shashikumar
Published on

ಹುಬ್ಬಳ್ಳಿ: ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದ 45 ರೌಡಿಶೀಟರ್‌ಗಳನ್ನು 6 ತಿಂಗಳವರೆಗೆ ಗಡಿಪಾರು ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಪಾರಾದವರು ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆಗಳಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದರು.

ಸಾಮಾನ್ಯವಾಗಿ ಚುನಾವಣೆ, ಗಲಭೆಗಳಂತ ಪ್ರಕರಣ ನಡೆದಾಗ ಗಡಿಪಾರು ಮಾಡಲಾಗುತ್ತಿತ್ತು. ಈಗ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದರು.

45 ಅಪರಾಧಿಗಳನ್ನು ಬೀದರ್, ಯಾದಗಿರಿ, ಕಲಬುರಗಿ, ದಕ್ಷಿಣ ಕನ್ನಡ ಹಾಗೂ ಚಾಮರಾಜನಗರಗಳಿಗೆ ಗಡಿಪಾರು ಮಾಡಲಾಗಿದೆ. ಗಡಿಪಾರಾದ ಅಪರಾಧಿಗಳು ಜಿಲ್ಲೆ ನಿಗದಿ ಪಡಿಸಿದ ಠಾಣೆಯಲ್ಲಿ ನಿತ್ಯ ವರದಿ ಮಾಡಿಕೊಳ್ಳಬೇಕು. ಆದೇಶ ಉಲ್ಲಂಘಿಸಿ ಮತ್ತೆ ನಗರಕ್ಕೆ ಬಂದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇನ್ನೂ ಹಲವು ಅಪರಾಧಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ನಡೆಸಲಾಗುತ್ತಿದೆ. ಅಷ್ಟೇ ಅಲ್ಲದೇ ಗುಂಡಾ ಕಾಯ್ದೆ ಹಾಕಲು ಸಹ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲು ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕೊಲೆ 9, ಕೊಲೆ ಯತ್ನ 12, ಸುಲಿಗೆ 3, ಮನೆಗಳ್ಳತನ 1, ಮಾನಭಂಗ 1, ಅಪಹರಣ 1, ಎನ್‌ಡಿಪಿಎಸ್ ಕಾಯ್ದೆಯಡಿ 9, ಅಬಕಾರಿ ಕಾಯ್ದೆಯಡಿ 1, ಮಟ್ಕಾ ಮತ್ತು ಕ್ರಿಕೆಟ್ ಬುಕ್ಕಿ, ಬೆಟ್ಟಿಂಗ್ 6, ಹಲ್ಲೆ 1, ದೊಬಿ ಇಬ್ಬರನ್ನು ಗಡಿಪಾರು ಮಾಡಲಾಗಿದೆ ಎಂದು ವಿವರಿಸಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಹುಂಡಿ ಕಳವು ಪ್ರಕರಣ ತನಿಖೆ: ಗಬ್ಬೂರು ವೃತ್ತದ ಬಳಿಯ ಜೈನ ಮಂದಿರದಲ್ಲಿ ಹುಂಡಿ ಕಳವು ಪ್ರಕರಣವನ್ನು ಭೇದಿಸಲಾಗುತ್ತಿದೆ. ಗುಜರಾತಿನ ಆರೋಪಿಗಳು ಈ ಮೊದಲು ಹುಬ್ಬಳ್ಳಿಯಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಅವರೇ ಈ ಕೃತ್ಯ ಮಾಡಿರುವುದು ಗಮನಕ್ಕೆ ಬಂದಿದೆ. ನಮ್ಮ ಪೊಲೀಸ್ ಇಲಾಖೆಯ ತಂಡ ಗುಜರಾತಿಗೆ ತೆರಳಿದೆ ಎಂದು ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕುರಿತು ಮಾಹಿತಿ ಪಡೆಯಲಾಗಿದೆ. ಆತ್ಮಹತ್ಯೆ ಒಳ್ಳೆಯದಲ್ಲ. ನಿಮಗೆ ಆಗಿರುವ ನೋವು ಇತರರ ಮುಂದೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು. ಯುವಕನ ಕುಟುಂಬದವರು ಆತ್ಮಹತ್ಯೆಗೆ ಪ್ರಚೋದನೆ ಎಂದು ದೂರು ಕೊಟ್ಟಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net