ಗೃಹಪ್ರವೇಶ ಸಮಾರಂಭದಲ್ಲಿ ಊಟ ಮಾಡಿದ 45 ಜನರು ಅಸ್ವಸ್ಥ

People admit to hospital
Published on

ರಾಣೆಬೆನ್ನೂರ: ಗೃಹಪ್ರವೇಶ ಸಮಾರಂಭದಲ್ಲಿ ಊಟ ಮಾಡಿ 45 ಜನರು ಅಸ್ವಸ್ಥಗೊಂಡ ಘಟನೆ ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

ಗ್ರಾಮದಲ್ಲಿ ಶೇಖರಪ್ಪ ಚನ್ನಬಸಪ್ಪ ಶಾಂತನವರ ಎಂಬುವವರ ಮನೆ ಪ್ರವೇಶ ಸಮಾರಂಭವನ್ನು ಆ. 25ರಂದು ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಬಂದವರಲ್ಲಿ ಊಟ ಮಾಡಿದ 45 ಜನರಿಗೆ ವಾಂತಿ-ಭೇದಿಯಾಗಿದೆ. ಕೂಡಲೇ ಎಲ್ಲರನ್ನೂ ಸಮೀಪದ ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆ ಪೈಕಿ ಕೆಲವರನ್ನು ರಾಣೆಬೆನ್ನೂರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ.

ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ಕಾಯಿಸಿ, ಆರಿಸಿದ ನೀರು ಕುಡಿಯಲು ಹಾಗೂ ಬಿಸಿ ಆಹಾರ ಪದಾರ್ಥ ಸೇವಿಸುವಂತೆ ತಿಳಿವಳಿಕೆ ನೀಡಲಾಗಿದೆ. ಶಾಸಕ ಪ್ರಕಾಶ ಕೋಳಿವಾಡ, ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ತಾಪಂ ಇಒ ಸುಮಲತಾ ಎಸ್.ಪಿ. ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.

ಗೃಹಪ್ರವೇಶ ಸಮಾರಂಭಕ್ಕೆ ಸುಮಾರು 400 ಜನರು ಹಾಜರಾಗಿದ್ದು, ಅವರಲ್ಲಿ 45 ಜನರಿಗೆ ವಾಂತಿ-ಭೇದಿ ಆಗಿದೆ. ಅಸ್ವಸ್ಥಗೊಂಡವರಿಗೆ ತುಮ್ಮಿನಕಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆ ಪೈಕಿ 15 ಜನರನ್ನು ರಾಣಿಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು ವಾಂತಿಭೇದಿಯ ಮಾದರಿಯನ್ನು ಪರೀಕ್ಷೆಗಾಗಿ ಫೊರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗಿದೆ. | ಡಾ.ರಾಜೇಶ್ವರಿ ಕದರಮಂಡಲಗಿ ತಾಲೂಕು ಆರೋಗ್ಯಾಧಿಕಾರಿಗಳು, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net