ರೋಮಾಂನಗೊಳಿಸಿದ ಜೋಡೆತ್ತಿನಗಾಡಿ ಓಟದ ಸ್ಪರ್ಧೆ

BULLOCK CART
Published on

ಚಿಕ್ಕಮಗಳೂರು: ಬ್ರಹ್ಮರಥೋತ್ಸವದ ಅಂಗವಾಗಿ ಹಿರೇಮಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನಗಾಡಿ ಓಟದ ಸ್ಪರ್ಧೆ ನೋಡುಗರನ್ನು ಮೈ ನವಿರೇಳಿಸಿತು.

ಅಂಬೇಡ್ಕರ್ ವೃತ್ತದ ಸೀತಾ ದಯಾನಂದ ಪೈ ಕಲ್ಯಾಣ ಮಂಟಪದ ಹಿಂಭಾಗ ಹಿರೇಮಗಳೂರು ಗ್ರಾಮಸ್ಥರು ಹಾಗೂ ಯುವಸಮೂಹ ಬುಧವಾರ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಾಲಿ-ಸುನಾಮಿ, ಬೆಂಕಿ-ಬಿರುಗಾಳಿ, ಜೂಲಿ-ಡಾಲಿ, ಗಗನ್, ಸಿಪಾಯಿ, ಬೀರ-ಧೀರ ಮುಂತಾದ ಹೆಸರುಗಳ ಜೋಡೆತ್ತುಗಳು ಸ್ಪರ್ಧಿಸಿದ್ದವು.

ಹಿರೇಮಗಳೂರು, ಕೆಂಪನಹಳ್ಳಿ, ಹಂಪಾಪುರ, ತರೀಕೆರೆ, ಹಾಸನ, ಪಾಂಡುಪುರ, ಮೈಸೂರು, ಬೇಲೂರು, ಹಳೇಬೀಡು, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 45 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮಹಿಳೆಯರು, ಮಕ್ಕಳೂ ಬಿಸಿಲಿನ ಬೇಗೆ ಲೆಕ್ಕಿಸದೆ ಛತ್ರಿ, ಟವೆಲ್, ಬಟ್ಟೆಗಳನ್ನು ತಲೆಮೇಲೆ ಹಾಕಿಕೊಂಡು ಸ್ಪರ್ಧೆ ನೋಡುತ್ತಿದ್ದರು. ಅಂಕಣಗಳಲ್ಲಿ ಒಮ್ಮೆ ಎರಡು ಗಾಡಿಗಳನ್ನು ಬಿಡುತ್ತಿದ್ದಂತೆ ರಾಸುಗಳ ಓಟ ಕಂಡು ಜನ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುತ್ತ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಜನರನ್ನು ಕಂಡ ಕೆಲವು ಎತ್ತುಗಳು ಆರಂಭದ ಗೆರೆ ಬಳಿ ಸ್ಪರ್ಧೆಗಿಳಿಯಲು ಹಿಂಜರಿದರೆ ಅದನ್ನು ದಾರಿಗೆ ತರಲು ಸ್ಪರ್ಧಾಳುಗಳು ಪರದಾಡಿದರು. ಡಿಎಆರ್ ಪೊಲೀಸರನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದ್ದರಿಂದ ಜೂಜಾಟಕ್ಕೆ ಬ್ರೇಕ್ ಬಿದ್ದಿತ್ತು.

ಜೋಡೆತ್ತುಗಳು ಅಂತಿಮ ಗೆರೆ ತಲುಪುವ ವೇಳೆಗೆ ಅಂಕಣದ ತಡೆಬೇಲಿ ಸುತ್ತ ನಿಂತಿದ್ದವರು ಎದ್ದುಬಿದ್ದು ದಾರಿ ಬಿಟ್ಟುಕೊಟ್ಟರು. ಪ್ರಥಮ ಬಹುಮಾನ 50 ಸಾವಿರ ರೂ., ದ್ವಿತೀಯ 30, ತೃತೀಯ 20 ಹಾಗೂ ನಾಲ್ಕನೇ ಬಹುಮಾನ 10 ಸಾವಿರ ರೂ.ನೊಂದಿಗೆ ಟ್ರೋಫಿಗಳನ್ನು ನೀಡಲಾಗುವುದು. ಸ್ಪರ್ಧೆ ಬುಧವಾರ ಮಧ್ಯರಾತ್ರಿಗೆ ಮುಕ್ತಾಯಗೊಳ್ಳಲಿದೆ.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಜಾನಯ್ಯ, ಮುತ್ತಯ್ಯ, ಡಿ.ಎಚ್.ನಟರಾಜ್, ಯೋಗೀಶ್, ಜಯಣ್ಣ, ಹಿರೇಮಗಳೂರು ಕೇಶವ, ಜಗದೀಶ್, ತಾರೇಶ್, ಚಂದ್ರಯ್ಯ, ರೇವನಾಥ್, ನಂದನ್, ವಸಂತ, ಸುನೀಲ್, ಸಂಜೈ ತೀರ್ಪಗಾರ ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net