

ಬೆಳ್ತಂಗಡಿ: ಉಜಿರೆ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 44ನೇ ವರ್ಷದ ಶ್ರೀ ಶಾರದಾ ಪೂಜೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅ.9ರಿಂದ 12ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. 9ರಂದು ಬೆಳಗ್ಗೆ ಶ್ರೀ ಗಣಪತಿ ಹವನ, ಶ್ರೀ ಶಾರದಾ ಮೂರ್ತಿ ಪ್ರತಿಷ್ಠ್ಠೆ ನಡೆಯಲಿದ್ದು, ಉಜಿರೆ ಉದ್ಯಮಿಗಳಾದ ಜ್ಯೋತಿ ಪ್ರಭಾತ್ ಪ್ರಭು, ಗೀತಾ ವಾಮನ ಬೆಂಡೆ, ಅಪ್ಪಿ ಕುಮಾರಸ್ವಾಮಿ ಗೌರವ ಉಪಸ್ಥಿತರಿರಲಿದ್ದಾರೆ.
ಬೆಳಗ್ಗೆ ಉಜಿರೆ ಛತ್ರಪತಿ ಶಿವಾಜಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ಪ್ರಿಯಾ ಸತೀಶ್ ಮತ್ತು ತಂಡದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.
10ರಂದು ಬೆಳಗ್ಗೆ ಪ್ರಾಥಮಿಕ, ಪ್ರೌಢ ಶಾಲೆ, ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ, ಸಂಜೆ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಚಿತ್ ಪ್ರಭಾ ಭಜನಾ ಮಂಡಳಿಯವರಿಂದ ಭಜನೆ, ರಾತ್ರಿ ಶ್ರೀ ದೇವಿ ಕಿರಣ್ ಇದರ ನೃತ್ಯ ಶಿಕ್ಷಕಿ ವಿದುಷಿ ಸ್ವಾತಿ ಜಯರಾಮ್, ಪೃಥ್ವಿ ಸತೀಶ್ ಶಿಷ್ಯವೃಂದದವರಿಂದ ಭರತನಾಟ್ಯ ನೃತ್ಯಾರ್ಪಣಂ ನಡೆಯಲಿದೆ.
11ರಂದು ಬೆಳಗ್ಗೆ ಉಜಿರೆ ಮಾತೃಮಂಡಳಿಯವರಿಂದ ಭಜನೆ, ಪ್ರಾಥಮಿಕ, ಪ್ರೌಢ ಶಾಲೆ, ಹಿರಿಯರ ವಿಭಾಗದಲ್ಲಿ ರಂಗವಲ್ಲಿ ಸ್ಪರ್ಧೆ, ಮುಂಡಾಜೆ ಶ್ರೀ ಬ್ರಾಹ್ಮರಿ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಸಂಜೆ ಶ್ರೀ ಕೃಷ್ಣ್ಣ ಗಾನಸುಧಾ ಸಂಗೀತ ವಿದ್ಯಾಲಯದ ವಿ.ಅನಸೂಯಾ ಪಾಠಕ್, ಶಿಷ್ಯವೃಂದದವರಿಂದ ಶ್ರೀ ದೇವಿ ಕೃತಿಗಳು, ರಾತ್ರಿ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ನಡೆಯಲಿದೆ.
12ರಂದು ಬೆಳಗ್ಗೆ ಅಕ್ಷರಾಭ್ಯಾಸ, ಶ್ರೀ ಮಾರಿಯಾಂಬಿಕ ಭಜನಾ ಮಂಡಳಿಯವರಿಂದ ಭಜನೆ, ಗುರಿಪಳ್ಳ ಜಯನಗರ ಶ್ರೀ ರಾಘವೇಂದ್ರ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಅಪರಾಹ್ನ ಛತ್ರಪತಿ ಶಿವಾಜಿ ಭಜನಾ ಮಂಡಳಿಯವರಿಂದ ಭಜನೆ, ಸಂಜೆ ಧರ್ಮಸ್ಥಳದ ಡಿ.ಬಿ.ಪ್ರಕಾಶ್ ದೇವಾಡಿಗ, ಬಳಗದವರಿಂದ ಸ್ಯಾಕ್ಸೊಫೋನ್ ವಾದನ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷ ಎನ್.ಮಾಧವ ಹೊಳ್ಳ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಪ್ರತಿದಿನ ಮಧ್ಯಾಹ್ನ, ರಾತ್ರಿ ಮಹಾಪೂಜೆ ನಡೆಯಲಿದೆ.
ರಾತ್ರಿ ಮಹಾಪೂಜೆ ಬಳಿಕ ವೈಭವದ ಶೋಭಾಯಾತ್ರೆಯಲ್ಲಿ ಶ್ರೀ ಶಾರದೆಯ ಮೂರ್ತಿಯನ್ನು ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಎನ್.ಮಾಧವ ಹೊಳ್ಳ, ಕಾರ್ಯದರ್ಶಿ ಅಜೇಯ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.