ದಕ್ಷಿಣ ಕನ್ನಡದಲ್ಲಿ ಸೋಂಕಿಗೆ ಮತ್ತೆ ವೇಗ?

Corona
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡದಲ್ಲಿ ಐಸಿಯು ಬೆಡ್, ವೆಂಟಿಲೇಟರ್ ಬೆಡ್‌ಗಳ ಕೊರತೆ ನಡುವೆ, ಕರೊನಾ ಸೋಂಕು ವೇಗವಾಗಿ ಹರಡುತ್ತಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ. ದಕ್ಷಿಣ ಕನ್ನಡದಲ್ಲಿ ಶುಕ್ರವಾರ 446 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ಈಗ ಸರಾಸರಿ ದಿನಂಪ್ರತಿ 2,400 ಜನರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಸಹಜವಾಗಿಯೇ ಪಾಸಿಟಿವ್ ಪ್ರಕರಣಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದೆ. ಕಳೆದ ಐದು ದಿನಗಳಲ್ಲಿ ಜಿಲ್ಲೆಯಲ್ಲಿ 11,877 ಮಂದಿಯ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಮತ್ತು ಮನೆಗಳಲ್ಲಿ ಚಿಕಿತ್ಸೆ ಪಡೆಯುವವರಲ್ಲಿ 197 ಮಂದಿ ಶುಕ್ರವಾರ ಗುಣವಾಗಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಒಟ್ಟು ಸಂಖ್ಯೆ 16,558 ತಲುಪಿದ್ದು, ಒಟ್ಟು ಗುಣಮುಖರಾದವರು 12,609. ಸಕ್ರಿಯ ಪ್ರಕರಣಗಳು 3,515.

ಪೊಲೀಸರಿಂದ ಪ್ಲಾಸ್ಮಾ ದಾನ: ಮಂಗಳೂರು ನಗರ ಅಪರಾಧ ಪತ್ತೆ ದಳದ ಸಿಬ್ಬಂದಿ ಮಣಿ ಹಾಗು ಸುಧೀರ್ ಕುಮಾರ್ ಹಾಗೂ ಸಿಎಆರ್ ವಿಭಾಗದ ರಂಜಿತ್ ರೈ ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚಳಕ್ಕೇನು ಕಾರಣ?

ನೈಜವಾಗಿ ಕರೊನಾ ಸೋಂಕಿನಿಂದಲೇ ಸಾವನ್ನಪ್ಪುವವರು ಶೇ.2ರಷ್ಟು ಜನ. ವೃದ್ಧರು ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಇರುವವರು ಹೊರತುಪಡಿಸಿ ಇತರರಿಗೆ ಜೀವಾಪಾಯ ಇರುವುದಿಲ್ಲ ಎಂದು ಹೆಚ್ಚಿನವರು ಕರೊನಾ ಸೋಂಕಿನ ಬಗ್ಗೆ ನಿರ್ಲಕ್ಷೃ ವಹಿಸುತ್ತಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಿನ ಜನರು ಮಾಸ್ಕ್ ಧರಿಸುತ್ತಿಲ್ಲ. ಧರಿಸಿದರೂ ಸರಿಯಾದ ಕ್ರಮ ಪಾಲಿಸುತ್ತಿಲ್ಲ. ದೈಹಿಕ ಅಂತರ ಪಾಲನೆ ಆಗುತ್ತಿಲ್ಲ. ಸೋಂಕು ವೇಗವಾಗಿ ಹರಡಲು ಜನರಿಗೆ ಈ ಸೋಂಕಿನ ಬಗೆಗಿದ್ದ ಭಯ ದೂರವಾಗಿರುವುದು ಮುಖ್ಯ ಕಾರಣ. ಕೆಲ ಸಂದರ್ಭಗಳಲ್ಲಿ ಸೋಂಕು ನಮಗೆ ತೊಂದರೆ ನೀಡದಿರಬಹುದು. ನಾವು ಹರಡುವ ಸೋಂಕಿನಿಂದ ಇತರರು ಪ್ರಾಣಾಪಾಯಕ್ಕೆ ಒಳಗಾಗಬಹುದು ಎಂದು ಡಾ.ರಾಮಚಂದ್ರ ಬಾಯರಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಆಸ್ಪತ್ರೆಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ

ದ.ಕ.ಜಿಲ್ಲೆಯಲ್ಲಿ ಕೋವಿಡ್ ಖಚಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಬೆಡ್ ಕೊರತೆ ಉಂಟಾಗುವ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆಸತ್ರೆಗಳ ಒಟ್ಟು ಬೆಡ್‌ಗಳ ಪೈಕಿ ಶೇ.50ರಷ್ಟನ್ನು ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಲಾಗಿದೆ. ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಮಸ್ಯೆಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

168 ಮಂದಿಗೆ ಸೋಂಕು

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 168 ಮಂದಿಗೆ ಕರೊನಾ ಪಾಸಿಟಿವ್ ವರದಿಯಾಗಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಹೊರ ಜಿಲ್ಲೆಯ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸಾವಿನ ಸಂಖ್ಯೆ 128ಕ್ಕೆ, ಒಟ್ಟು ಸೋಂಕಿತರ ಸಂಖ್ಯೆ 13,743ಕ್ಕೆೆ ಏರಿದೆ. 1,584 ಮಂದಿಯ ಗಂಟಲ ದ್ರವ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಇನ್ನೂ 410 ಮಂದಿಯ ವರದಿ ಬರಲು ಬಾಕಿ ಇದೆ. 1831 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 102 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಶುಕ್ರವಾರ 102 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. 100 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇಬ್ಬರು ಇತರ ರಾಜ್ಯಗಳಿಂದ ಬಂದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net