

ಕೋಲಾರ: ಸರ್ಕಾರದ ಸಹಾಯಧನದಲ್ಲಿ ರೈತರಿಗೆ ವಿತರಿಸಬೇಕಿದ್ದ ಬೇವು ಲೇಪಿತ ಯೂರಿಯಾ ರಸಗೊಬ್ಬರ ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಮಾಲೂರಿನ ಕೊಡಗಿನಬೆಲೆ ಗ್ರಾಮದಲ್ಲಿನ ಮರ್ಕೂರಿ ಪಾಲಿಮರ್ ಕಂಪನಿಯಲ್ಲಿದ್ದ 440 ಮೂಟೆ ಅಕ್ರಮ ದಾಸ್ತಾನನ್ನು ಕೃಷಿ ಇಲಾಖೆ ಜಪ್ತಿ ಮಾಡಿದೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪದೇವಿ ಅವರಿಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಜಾಗೃತ ಕೋಶದ ಜಾರಿ ದಳ ಅಧಿಕಾರಿ ಎಚ್.ಕೆ. ರಾಮಕೃಷ್ಣ, ಮಾಲೂರು ಕಸಬಾ ಕೃಷಿ ಅಧಿಕಾರಿ ಬಿ.ಎಂ.ರಾಘವೇಂದ್ರ ಬುಧವಾರ ಮರ್ಕೂರಿ ಪಾಲಿಮರ್ ಕಂಪನಿಗೆ ತೆರಳಿದಾಗ ಕಾಂಪೌಂಡ್‌ನಿಂದ ಲಾರಿ ಹೊರಕ್ಕೆ ಬರುತ್ತಿತ್ತು. ಚಾಲಕನನ್ನು ಅಧಿಕಾರಿಗಳು ವಿಚಾರಿಸಿದಾಗ ಲಾರಿ ಮಾಲೀಕ ಕೃಷ್ಣಪ್ರಸಾದ್ ರೆಡ್ಡಿ ನೀಡಿದ 440 ಮೂಟೆ ಯೂರಿಯಾವನ್ನು ತಂದಿದ್ದಾಗಿ ತಿಳಿಸಿದ್ದಾನೆ.
ಲಾರಿ ಚಾಲಕನಲ್ಲಿ ಇದ್ದ ಬಿಲ್‌ನಂತೆ ಚೆನ್ನೈನಿಂದ ವಿಜಯ ಸಂಸ್ಥೆಯ ಹೆಸರಿನ ಗೊಬ್ಬರ ವೇಮಗಲ್ ಸೊಸೈಟಿಗೆ ಹೋಗಬೇಕಿತ್ತು. ಆದರೆ ಪಾಲಿಮರ್ ಕಂಪನಿಯಲ್ಲಿ ಅನ್‌ಲೋಡ್ ಮಾಡಿದ್ದರಿಂದ ಅನುಮಾನಗೊಂಡ ಅಧಿಕಾರಿಗಳು ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಕಂಪನಿ ಗೋದಾಮಿನಲ್ಲಿ ಯೂರಿಯಾ ದಾಸ್ತಾನು ಮಾಡಿದ್ದನ್ನು ಚಾಲಕ ಅಮರೇಗೌಡ ಬಾಯಿ ಬಿಟ್ಟಿದ್ದಲ್ಲದೆ ದಾಸ್ತಾನು ತೋರಿಸಿದ್ದಾನೆ.
ದಾಸ್ತಾನು ಜಪ್ತಿ: ರೈತರಿಗೆ ಸಹಾಯಧನದಲ್ಲಿ ನೀಡಬೇಕಿದ್ದ 1.17 ಕೋಟಿ ರೂ. ಮೌಲ್ಯದ 440 ಮೂಟೆ ಯೂರಿಯಾವನ್ನು ಜಪ್ತಿ ಮಾಡಿ ಲಾರಿ ಮಾಲೀಕ ಕೃಷ್ಣಪ್ರಸಾದ್ ರೆಡ್ಡಿ, ಲಾರಿ ಚಾಲಕ ಅಮರೇಗೌಡ ಹಾಗೂ ಮರ್ಕ್ಯುರಿ ಪಾಲಿಮರ್ ಕಂಪನಿ ಮಾಲೀಕ ಪ್ರಭಾಕರ್ ಮೇಲೆ ಕೃಷಿ ಅಧಿಕಾರಿ ರಾಘವೇಂದ್ರ ಮಾಲೂರು ಠಾಣೆಯಲ್ಲಿ ದೂರು ನೀಡಿದ್ದು, ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚೆನ್ನೈ ಮೂಲದ ಕಂಪನಿಯ ಕಚೇರಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿದ್ದು, ಅಲ್ಲಿಂದ 440 ಮೂಟೆಗಳು ಲಾರಿಯಲ್ಲಿ ಲೋಡ್ ಆಗಿ ಬಂದಿರುವ ಮಾಹಿತಿ ಕೃಷಿ ಇಲಾಖೆಗೆ ಲಭ್ಯವಾಗಿದೆ. ವೇಮಗಲ್ ಸೊಸೈಟಿ ಹೆಸರಿನ ಬಿಲ್ ಕೂಡ ನಕಲಿಯಾಗಿದೆ. ಫ್ಲೈವುಡ್‌ನಲ್ಲಿ ಬಳಸುವ ಗಮ್‌ಗೆ ಯೂರಿಯಾವನ್ನು ಬಳಸುತ್ತಿರುವ ಬಗ್ಗೆಯೂ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ರೈತರು ಬೇವು ಲೇಪಿತ ಯೂರಿಯಾ ಬಳಸುವಂತೆ, ಸಬ್ಸಿಡಿಯುಕ್ತ ಯೂರಿಯಾ ಕಳ್ಳಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರದಲ್ಲಿ ರಸಗೊಬ್ಬರ ಖಾತೆ ಸಚಿವರಾಗಿದ್ದ ಅನಂತ ಕುಮಾರ್ ಹೊಸ ಯೂರಿಯಾ ನೀತಿ ಜಾರಿಗೆ ಕ್ರಮ ಕೈಗೊಂಡಿದ್ದರು. ಅದರಂತೆ 2015 ಸೆ. 1ರಿಂದ ಶೇ.100 ಬೇವು ಲೇಪಿತ ಯೂರಿಯಾದ ಉತ್ಪಾದನೆ ಆರಂಭಗೊಂಡು ಡಿ. 1ರ ನಂತರ ಬೇವು ಲೇಪನ ಮಾಡಲಾಗುತ್ತಿದೆ. ಪ್ರಸ್ತುತ ರೈತರಿಗೆ ಮೂಟೆಗೆ 260 ರೂಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಬೇವು ಲೇಪಿತ ಯೂರಿಯಾದಿಂದ ಯೂರಿಯಾ ದುರ್ಬಳಕೆಯನ್ನು ಸಂಪೂರ್ಣ ತಡೆಯಲು ಸಾಧ್ಯವಾಗಿದೆ ಎಂದು ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿತ್ತು. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗಿಲ್ಲ ಎಂಬುದು ಈ ಘಟನೆಯಿಂದ ಸಾಕ್ಷಿಯಾಗಿದೆ.
ಯೂರಿಯಾ ಅಕ್ರಮ ದಾಸ್ತಾನು ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ. ಮಾರ್ಕೊಂಡಪ್ಪ, ಸಿಪಿಐ, ಮಾಲೂರು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮರ್ಕೂರಿ ಪಾಲಿಮರ್ ಕಂಪನಿ ಮೇಲೆ ಕಾರ್ಯಾಚರಣೆ ನಡೆಸಿ ಯೂರಿಯಾ ಅಕ್ರಮ ದಾಸ್ತಾನು ವಶಕ್ಕೆ ಪಡೆದು ಬೀಗ ಜಡಿಯಲಾಗಿದೆ. ಜಿಲ್ಲೆಗೆ ಹಂಚಿಕೆಯಾದ ರಸಗೊಬ್ಬರ, ದಾಸ್ತಾನು ಹಾಗೂ ಮಾರಾಟ ಕುರಿತು, ವಿತರಣೆ ಪರಿಶೀಲಿಸಲಾಗುತ್ತಿದೆ. ರೈತರಿಗೆ ವಿತರಿಸಬೇಕಿದ್ದ ಯೂರಿಯಾ ಖಾಸಗಿಯವರ ಕೈ ಸೇರಿದ್ದು ಹೇಗೆ, ಯಾವ ಉದ್ದೇಶಕ್ಕಾಗಿ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಾರೆ. ರಸಗೊಬ್ಬರ ಅಕ್ರಮ ಸಾಗಾಟದ ಮೇಲೆ ನಿಗಾ ಇಡಲಾಗಿದೆ. ರೂಪದೇವಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ