44 ಸಂಘಗಳಿಗೆ 1.92 ಕೋಟಿ ರೂ. ಸಾಲ ವಿತರಣೆ

IMG_20210301_121128
Published on

ಗೌರಿಬಿದನೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವಧಿಯಲ್ಲಿ ಅಸ್ಥಿತ್ವಕ್ಕೆ ಬಂದ ಸ್ತ್ರೀ ಶಕ್ತಿ ಸಂಘಗಳು ಆರ್ಥಿಕ ಹಾಗೂ ಸಾಮಾಜಿಕ ಕ್ರಾಂತಿ ಉಂಟು ಮಾಡುತ್ತಿವೆ ಎಂದು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಹೇಳಿದರು.

ಕಲ್ಲುಡಿ ವ್ಯವಸಾಯ ಸೇವಾ ಸಹಕಾರ ಸಂಘದಿಂದ 44 ಸಂಘಗಳಿಗೆ 1.92 ಕೋಟಿ ರೂ. ಸಾಲ ವಿತರಣೆ ಮಾಡಿ ಮಾತನಾಡಿ, 20 ವರ್ಷಗಳ ಹಿಂದೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲಿ ಸಚಿವೆ ಮೋಟಮ್ಮ ದೃಢ ನಿರ್ಧಾರದಿಂದ ರಾಜ್ಯದಲ್ಲಿ ಸ್ತ್ರೀಶಕ್ತಿ ಸಂಘಗಳ ಉದಯವಾಯಿತು. ಅದರ ಪ್ರತಿಫಲ ಲಕ್ಷಾಂತರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ಸಮಾಜದಲ್ಲಿ ಆರ್ಥಿಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಮಹಿಳೆಯರು ತಮ್ಮ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶ್ರಮಿಸುತ್ತಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತದಿಂದ ಸಾಮಾನ್ಯರು ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ನೀಡುತ್ತಿದ್ದ ಅಕ್ಕಿಯನ್ನು 7 ರಿಂದ 5 ಕೆಜಿ ಗೆ ಇಳಿಕೆ ಮಾಡಲಾಗಿದೆ. ರಾಜ್ಯ ಬಜೆಟ್ ನಂತರ ಎರಡು ಕೆಜಿಗೆ ಇಳಿದರೂ ಅಚ್ಚರಿಯಿಲ್ಲ. ತೈಲ ಬೆಲೆಗಳ ಏರಿಕೆಯಿಂದಾಗಿ ದಿನನಿತ್ಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೇರುತ್ತಿದೆ. ಆದ್ದರಿಂದ ಮತ ಹಾಕುವಾಗ ಯೋಚಿಸಿ ಮತದಾನ ಮಾಡಬೇಕು. ಅಭಿವೃದ್ಧಿ ಪರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಗಾಯತ್ರಿ ಬಸವರಾಜ್ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳು ಶೂನ್ಯ ಬಡ್ಡಿದರಲ್ಲಿ ಸಾಲ ವಿತರಿಸುತ್ತವೆ. ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಉದ್ದೇಶಿತ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ನಮ್ಮ ಬ್ಯಾಂಕ್ ನಿಂದ 1400ಕ್ಕೂ ಹೆಚ್ಚು ಕೋಟಿ ಸಾಲವನ್ನು ರೈತರು ಮತ್ತು ಮಹಿಳೆಯರಿಗೆ ವಿತರಣೆ ಮಾಡಲಾಗಿದೆ. ಬ್ಯಾಂಕ್ ಅನ್ನು ತಾಂತ್ರಿಕರಣಗೊಳಿಸುವ ಜತೆಗೆ ಮೈಕ್ರೋ ಪೈನಾನ್ಸ್ , ಎಟಿಎಂ ಸೌಲಭ್ಯ, ಪಾರದರ್ಶಕತೆ ಆದ್ಯತೆ ನೀಡಲಾಗುತ್ತಿದ್ದು, ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಬ್ಯಾಂಕುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

ಸಂಘದ ನಿರ್ದೇಶಕರಾದ ನರಸಿಂಹಮೂರ್ತಿ, ವೆಂಕಟಾಚಲಪತಿ, ಎಂ. ಜೆ. ಕೃಷ್ಣಪ್ಪ, ಎಂ ಜೆ. ಅಶೋಕ್, ನಾರಾಯಣಪ್ಪ, ಗ್ರಾಮದ ಮುಖಂಡ ನಾರಾಯಣಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net