43.25 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ

29 GDG AKKI
Published on

ಗದಗ: ನಗರದ ಟ್ಯಾಗೋರ್ ರಸ್ತೆಯ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲ ಗಳನ್ನು ಶುಕ್ರವಾರ ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 43.25 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಕಿ ಜತೆಗೆ 5 ಕೆಜಿ ತೊಗರಿಬೆಳೆ, 3 ಕೆಜಿ ಹೆಸರು ಕಾಳು ಪತ್ತೆಯಾಗಿವೆ.

ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರದ ವೀರೇಶ ಮಾನ್ವಿ ಎಂಬುವರು ಆಹಾರ ಇಲಾಖೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಟಗೇರಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ನಗರದಲ್ಲಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ರೈಸ್​ವಿುಲ್​ಗಳಿಗೆ ಮಾರಾಟ ಮಾಡುವ ದಂಧೆ ಅವಳಿ ನಗರ ಸೇರಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿದೆ. ಇತ್ತೀಚೆಗೆ ನಗರದ ಅಬ್ಬಿಗೇರಿ ಕಾಂಪೌಂಡ್, ಮುಳಗುಂದ ನಾಕಾ, ಬೆಟಗೇರಿ ಹೀಗೆ ಅನೇಕ ಕಡೆ ದಾಸ್ತಾನು ಮಾಡಿದ್ದ ಅನ್ನಭಾಗ್ಯ ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೂ, ಅಕ್ರಮ ದಾಸ್ತಾನು ಮತ್ತು ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದೆ.

ಗದಗ ನಗರದ ಟ್ಯಾಗೋರ್ ರಸ್ತೆಯಲ್ಲಿರುವ ಬಸವರಾಜ ವಾಲಿ ಎಂಬುವರ ಮನೆಯಲ್ಲಿ ಮಹಾಂತೇಶ ಲಕ್ಕುಂಡಿ ಎಂಬುವರು ಅಕ್ಕಿ ದಾಸ್ತಾನು ಮಾಡಿದ್ದಾರೆ. ಈ ಕುರಿತು ತನಿಖೆ ಮುಂದುವರಿಸಲಾಗಿದ್ದು, ಎಫ್​ಐಆರ್ ದಾಖಲಿಸಬೇಕಿದೆ. | ಮಂಜುಳಾ ಆಕಳದನಿರೀಕ್ಷಕಿ, ಆಹಾರ ಇಲಾಖೆ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net