ಮೈಸೂರು ರೈಲ್ವೆಗೆ 413.73 ಕೋಟಿ ರೂ. ಆದಾಯ

mysore
Published on

ಮೈಸೂರು: ಸರಕು ಸಾಗಣೆ ಮತ್ತು ಪ್ರಯಾಣಿಕರ ವಿಭಾಗದ ಆದಾಯ ಗಳಿಕೆಯಲ್ಲಿ ಮೈಸೂರು ವಿಭಾಗ ನೂತನ ದಾಖಲೆ ನಿರ್ಮಿಸಿದೆ.


2023-24ರಲ್ಲಿ ಮೈಸೂರು ವಿಭಾಗವು 11.648 ದಶ ಲಕ್ಷ ಟನ್‌ಗಳಷ್ಟು ಲೋಡಿಂಗ್ ಸಾಧಿಸಿದೆ. ಇದು ಹಿಂದಿನ ವರ್ಷದ ಅತ್ಯಧಿಕ ದಾಖಲೆಯನ್ನು ಶೇ.22ರಿಂದ ಮೀರಿಸಿದೆ.


ಈ ಗಮನಾರ್ಹ ಸಾಧನೆಯು ವಿಭಾಗದ ಕಾರ್ಯಾಚರಣೆಯ ದಕ್ಷತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು ಗಮನಾರ್ಹವಾಗಿ ಶೇ.11.7ರಷ್ಟು ದಾಟಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾ.31ರವರೆಗೆ 928 ವ್ಯಾಗನ್‌ಗಳನ್ನು ಲೋಡ್ ಮಾಡಿದ್ದು, ಆಗಸ್ಟ್ 2023ರಲ್ಲಿ ಸ್ಥಾಪಿಸಲಾದ ಹಿಂದಿನ ದಾಖಲೆಯನ್ನು ಮೀರಿಸಿ ಒಂದೇ ದಿನದಲ್ಲಿ ಲೋಡ್ ಮಾಡಿದ ಅತ್ಯಧಿಕ ವ್ಯಾಗನ್‌ಗಳಿಗಾಗಿ ಹೊಸ ದಾಖಲೆ ಸ್ಥಾಪಿಸಿದೆ.

ಅಲ್ಲದೆ 1.145 ದಶಲಕ್ಷ ಟನ್‌ಗಳನ್ನು ಲೋಡ್ ಮಾಡಿ, ಡಿಸೆಂಬರ್ 2023ರಲ್ಲಿ ಒಂದೇ ಮಾಸದಲ್ಲಿ ಮಾಡಿದ್ದ 1.125 ದಶಲಕ್ಷ ಟನ್‌ಗಳ ಹಿಂದಿನ ಅತ್ಯಧಿಕ ದಾಖಲೆ ಮುರಿಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


9.325 ದಶಲಕ್ಷ ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಲೋಡ್ ಮಾಡಿದ್ದು, ಹಿಂದಿನ ವರ್ಷದ ಅತ್ಯಧಿಕ ದಾಖಲೆಯಾದ 6.995 ದಶ ಲಕ್ಷ ಟನ್‌ಗಳನ್ನು ಗಮನಾರ್ಹವಾಗಿ ಶೇ.33.3ರಷ್ಟು ಮೀರಿಸಿದೆ ಎಂದು ತಿಳಿಸಿದ್ದಾರೆ.


2023-24ರ ಅವಧಿಯಲ್ಲಿ 413.73 ಕೋಟಿ ರೂ. ಆದಾಯ ಗಳಿಸಿದ್ದು, ವಿಭಾಗವು ಹಿಂದಿನ ವರ್ಷದ ಗಳಿಕೆಯನ್ನು ಶೇ.9.3ರಷ್ಟು ಮೀರಿಸಿ ಸಾಧನೆ ಮೆರೆದಿದೆ. ಪ್ರಸಕ್ತ ವರ್ಷದಲ್ಲಿ 10.65 ಕೋಟಿ ರೂ. ಗಳಿಕೆಯೊಂದಿಗೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.25.29ರಷ್ಟು ಹೆಚ್ಚಳವಾಗಿದೆ.

ಮಾರ್ಚ್‌ವರೆಗೆ ಟಿಕೆಟ್ ತಪಾಸಣೆಯ ಗಳಿಕೆಯು 8.06 ಕೋಟಿ ರೂ.ರಷ್ಟಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.14.48ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net