ಇಸ್ರೇಲ್‌ನಲ್ಲಿ ಭಟ್ಕಳ ತಾಲೂಕಿನ 41 ಜನ ಸುರಕ್ಷಿತ

BKL 2
Published on

ಭಟ್ಕಳ: ಇಸ್ರೇಲ್ ದೇಶದಲ್ಲಿ ನೆಲೆಸಿರುವ ತಾಲೂಕಿನ 41 ಮಂದಿ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿದ್ದು, ಸದ್ಯ ಸುರಕ್ಷಿತವಾಗಿದ್ದಾರೆ.
ಹಮಾಸ್ ಭಯೋತ್ಪಾದನೆ ಸಂಘಟನೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಪರಿಣಾಮ ಇಸ್ರೇಲ್ ಯುದ್ಧ ಸಾರಿದೆ. ಈ ಹಿನ್ನ್ನೆಲೆಯಲ್ಲಿ ಸಾವಿರಾರು ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸುರಕ್ಷತೆಗಾಗಿ ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಭಟ್ಕಳದ 40 ಜನರು ಇಸ್ರೇಲ್‌ನಲ್ಲಿ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಸದ್ಯ ಕನ್ನಡಿಗರೆಲ್ಲರೂ ಒಂದು ವ್ಯಾಟ್ಸಾಪ್ ಗ್ರೂಪ್ ಮಾಡಿದ್ದು, ಎಲ್ಲರೂ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತರಾಗಿದ್ದೇವೆ ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಫ್. ಗೋಮ್ಸ್ ಮತ್ತು ಡಾಲ್ಪಿ ಗೋಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.

ವಿಶೇಷ ಪ್ರಾರ್ಥನೆ: ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ದಾಳಿ ನಡೆಸಿದ್ದು, ಇಸ್ರೇಲ್‌ನಲ್ಲಿ ಶಾಂತಿ ಮರಳಿ ನೆಲಸಲಿ ಎಂದು ಭಟ್ಕಳ ತಾಲೂಕಿನ ಚರ್ಚ್‌ನಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆ ನಡೆದಿದೆ. ಭಟ್ಕಳದ ಮುಂಡಳ್ಳಿ, ಪುರವರ್ಗ, ಮುರ್ಡೇಶ್ವರ ಚರ್ಚಗಳಲ್ಲೂ ಪ್ರಾರ್ಥನೆ ನಡೆದಿದೆ. ಇಸ್ರೇಲ್ ಯುದ್ಧದಲ್ಲಿ ಗೆಲುವು ಸಾಧಿಸಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ನಡೆದಿದೆ.

ಭಯದ ವಾತಾವರಣ

ಹಮಾಸ್ ಉಗ್ರರು ಇಸ್ರೇಲ್ ದೇಶದ ತುಂಬ ನುಸುಳಿಕೊಂಡಿದ್ದು, ಇಸ್ರೇಲ್ ರಕ್ಷಣಾಪಡೆ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹೊಡೆದುರುಳಿಸುತ್ತಿದೆ. ಭಯದ ವಾತಾವರಣದಲ್ಲಿ ದಿನ ಕಳೆಯುವಂತಾಗಿದೆ ಎಂದು ಇಸ್ರೇಲ್‌ನಲ್ಲಿರುವ ಭಟ್ಕಳದ ಹನುಮಾನ ನಗರದ ಉಮೇಶ ಭೀಮಯ್ಯ ನಾಯ್ಕ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net