40ಕ್ಕೂ ಹೆಚ್ಚು ಮಹಿಳಾ ಪೌರಬಂಧುಗಳಿಗೆ ಬಾಗಿನ

33
Published on

ಮೈಸೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ನಗರಪಾಲಿಕೆ ಆಡಳಿತ ಪಕ್ಷದ ನಾಯಕ ಮ.ವಿ.ರಾಮಪ್ರಸಾದ್ ಭಾನುವಾರ ತಮ್ಮ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮಹಿಳಾ ಪೌರಬಂಧುಗಳಿಗೆ ಬಾಗಿನ ನೀಡಿ ಗೌರವಿಸಿದರು.
ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ 40ಕ್ಕೂ ಹೆಚ್ಚು ಮಹಿಳಾ ಪೌರಕಾರ್ಮಿಕರಿಗೆ ಸಂಪ್ರದಾಯದಂತೆ ಹೂ-ಹಣ್ಣು, ತಾಂಬೂಲ ಹಾಗೂ ಸೀರೆಯನ್ನು ಒಳಗೊಂಡ ಬಾಗಿನ ನೀಡಿ ಗೌರವಿಸಿದರು.
ಯಾವ ಹಬ್ಬವಿದ್ದರೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುತ್ತಾರೆ. ಮಾತ್ರವಲ್ಲದೆ, ಮೊದಲು ನಗರವನ್ನು ಸ್ವಚ್ಛಗೊಳಿಸಿ ಹಬ್ಬದ ವಾತಾವರಣ ಸೃಷ್ಟಿಸಿ, ನಂತರ ಅವರು ಮನೆಯಲ್ಲಿ ಹಬ್ಬ ಮಾಡುತ್ತಾರೆ. ಹೀಗಾಗಿ ಸಮಾಜದ ನಿಜವಾದ ಬಂಧುಗಳಾದ ಪೌರಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ಬಾರದೆ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡರೆ, ಪೌರಕಾರ್ಮಿಕರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಗರದಾದ್ಯಂತ ಸ್ವಚ್ಛತಾ ಕಾರ್ಯ ಮಾಡಿದರು. ಹೀಗಾಗಿ ಪೌರಕಾರ್ಮಿಕರೇ ನಮ್ಮೆಲ್ಲರ ನಿಜವಾದ ವಾರಿಯರ್ಸ್ ಆಗಿದ್ದಾರೆ ಎಂದರು.
ಪೌರಕಾರ್ಮಿಕರಿಗೆ ಮೂಲಸೌಕರ್ಯ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಸೇರಿದನಂತೆ ಇನ್ನಿತರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಲು ಈ ಪ್ರೋತ್ಸಾಹದಾಯಕ ಕೆಲಸ ಮಾಡಲಾಗಿದೆ. ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕಾಯಕವೇ ಕೈಲಾಸವೆಂದು ಭಾವಿಸಿ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಪೌರಬಂಧುಗಳಿಗೆ ಬಾಗಿನ ನೀಡಿ ಗೌರವಿಸಿರುವುದು ಅತ್ಯಂತ ತೃಪ್ತಿ ನೀಡಿದೆ ಎಂದು ಹೇಳಿದರು.
ನಗರಪಾಲಿಕೆ ಆರೋಗ್ಯ ಪರಿವೀಕ್ಷಕ ಶಿವಪ್ರಸಾದ್, ಮುಖಂಡರಾದ ಸಿ.ಸಂದೀಪ್, ಅದ್ವೈತ್, ಅರವಿಂದ್, ಲಲಿತಾಂಬ, ಮಂಜುನಾಥ್, ಬಸವರಾಜು, ದೇವೇಂದ್ರಸ್ವಾಮಿ, ತೀರ್ಥ, ಸೋಮೇಶ್, ಶ್ರೀಕಂಠ, ಶೇಖರ್, ರವಿ, ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net