ಪುರೋಹಿತರು ಉಳಿಸಲಿ ಧರ್ಮ, ಸಂಸ್ಕಾರ...

Putthige 1
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಕರೆ

ರಾಜಾಂಗಣದಲ್ಲಿ ಧಾರ್ಮಿಕ ಸಮಾವೇಶ

ವಿದ್ಯಾಪೀಠದ 40ನೇ ವಾರ್ಷಿಕೋತ್ಸವ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಾಲಕರಲ್ಲಿ ಸಂಸ್ಕಾರ ಇಲ್ಲದಿದ್ದರೆ ಮಕ್ಕಳಿಗೂ ಅದು ಲಭಿಸದು. ತಂದೆ-ತಾಯಿಯರಿಗೆ ಸಂಸ್ಕಾರ ಇಲ್ಲದಿರಲು ಕಾರಣ ಅವರ ಕುಟುಂಬದ ಪುರೋಹಿತರೇ ಆಗಿದ್ದಾರೆ. ಪೂಜೆ ಇತ್ಯಾದಿ ಕಾರ್ಯಕ್ರಮದ ನಿಮಿತ್ತ ಮನೆಗಳಿಗೆ ತೆರಳುವ ಪುರೋಹಿತರು ಮನ:ಪರಿವರ್ತನೆಯ ಕೆಲಸ ಮಾಡುತ್ತಿಲ್ಲ. ಇದರಿಂದಾಗಿಯೇ ದೇಶದಲ್ಲಿಂದು ಧರ್ಮ ಅವನತಿಯತ್ತ ಸಾಗುತ್ತಿದೆ. ಈ ನ್ಯೂನತೆ ಸರಿಪಡಿಸಿಕೊಂಡು ಧರ್ಮ-ಸಂಸ್ಕಾರ ಉಳಿಸಲು ಯಾವುದೇ ಸಂಕೋಚವಿಲ್ಲದೆ ಪುರೋಹಿತರು ಮಾರ್ಗದರ್ಶನ ಮಾಡಬೇಕು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಕರೆ ನೀಡಿದರು.

Putthige 2
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ, ಪುತ್ತಿಗೆ ಶ್ರೀ ಸುಗುಣ ಸ್ಕೂಲ್​ನ ಪ್ರಥಮ ವಾರ್ಷಿಕೋತ್ಸವ ಹಾಗೂ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ನಿಮಿತ್ತ ಏ.5ರಂದು ಆಯೋಜಿಸಿದ್ದ ಧಾರ್ಮಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ಪೌರೋಹಿತ್ಯ ಪ್ರವೃತ್ತಿಯಾಗಲಿ

Extra
ನಾಮಕರಣ ಕಾರ್ಯಕ್ರಮಕ್ಕೆ ಕರೆದಾಗ ಏನೆಂದು ಹೆಸರಿಡುತ್ತೀರಿ ಎಂದು ಕೇಳಬೇಕು. ಅಸಂಬದ್ಧವಾದ ಹೆಸರಿಟ್ಟರೆ ಅದರ ಬದಲು ದೇವರ ಹೆಸರನ್ನೇ ಇಡಲು ಪ್ರೇರೇಪಿಸಬೇಕು. ಉಪನಯನಕ್ಕೆ ಕರೆದರೆ ಬಳಿಕ ವಟುಗಳು ನಿರಂತರ ಸಂಧ್ಯಾವಂದನೆ ಮಾಡುವಂತೆ ನೋಡಿಕೊಳ್ಳಬೇಕು. ಎಲ್ಲ ಮಕ್ಕಳೂ ತಂದೆ-ತಾಯಿಗೆ ನಮಸ್ಕಾರ ಮಾಡಬೇಕು. ಪಾಲಕರೇ ಮುಂದಾಗಿ ಮಕ್ಕಳಿಂದ ನಮಸ್ಕಾರ ಮಾಡಿಸಿಕೊಳ್ಳಬೇಕು. ಮಕ್ಕಳೊಂದಿಗೇ ಊಟ ಮಾಡುವ ಸಂದರ್ಭ ಸಾಧ್ಯವಾಗಿಸಿಕೊಳ್ಳಲು ಪಾಲಕರಿಗೆ ಪುರೋಹಿತರು ಕಟ್ಟುನಿಟ್ಟಾಗಿ ಆದೇಶ ಮಾಡಬೇಕು. ಈ ಮಾರ್ಗದಿಂದ ಮಾತ್ರ ಬ್ರಾಹ್ಮಣ್ಯ ಉಳಿಸಲು ಸಾಧ್ಯ. ಪೌರೋಹಿತ್ಯ ವೃತ್ತಿಯಲ್ಲ, ಅದು ಪ್ರವೃತ್ತಿಯಾಗಬೇಕು. ಇದಕ್ಕಾಗಿಯೇ ಪುತ್ತಿಗೆ ಮಠದಲ್ಲಿ ಸಂಧ್ಯಾ ಶಾಲೆ ಆರಂಭಿಸಲಾಗುವುದು ಎಂದರು.

ಮಕ್ಕಳನ್ನು ವಿದ್ಯಾಪೀಠಕ್ಕೆ ಕಳುಹಿಸಿ

Putthige 3
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಅಜ್ಜ-ಅಜ್ಜಿ, ತಂದೆ-ತಾಯಿ, ಮಕ್ಕಳು-ಮರಿಮಕ್ಕಳು ಹೀಗೆ ಎಲ್ಲರೂ ಒಟ್ಟಾಗಿರುವ ಕುಟುಂಬ ಕಾಣುತ್ತಿಲ್ಲ. ಈ ಹಿಂದೆ ಮನೆಯಲ್ಲಿದ್ದ ಹಿರಿಯರಿಂದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಲಭಿಸುತ್ತಿತ್ತು. ಸಾಮಾಜಿಕವಾಗಿ, ಧಾರ್ಮಿಕವಾಗಿ ಹೇಗೆ ಬದುಕಬೇಕೆಂಬ ಜ್ಞಾನ, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರಗಳು ಮಕ್ಕಳಿಗೆ ಬೆಳೆಯುತ್ತಲೇ ಮನೆಯಲ್ಲಿ ಲಭಿಸುತ್ತಿತ್ತು. ಇಂದು ಕುಟುಂಬ ಛಿದ್ರವಾಗಿದ್ದು, ಮನೆಗಳಲ್ಲಿ ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ. ಇಂದಿನ ಪಾಲಕರಿಗೆ ಮಕ್ಕಳನ್ನು ಹೇಗೆ ಸಾಕಬೇಕು ಎನ್ನುವುದೇ ತಿಳಿದಿಲ್ಲ. ಅನೇಕ ಪಾಲಕರು ಮಕ್ಕಳನ್ನು ಹಾಸ್ಟೆಲ್​ ಪಾಲು ಮಾಡುತ್ತಿದ್ದಾರೆ. ನಿಜಕ್ಕೂ ಇದು ಪಶ್ಚಾತ್ತಾಪ ಪಡುವ ಸಂದರ್ಭ. ಮಕ್ಕಳನ್ನು ಹಾಸ್ಟೆಲ್​ಗೆ ಹಾಕುವ ಬದಲು ಮಠಗಳು ನಡೆಸುವ ವಿದ್ಯಾಪೀಠಕ್ಕೆ ಕಳುಹಿಸುವ ಮನಸ್ಸು ಬರಲಿ ಎಂದು ಆಶಯ ವ್ಯಕ್ತಪಡಿಸಿದರು.
Putthige 4
ವಿದ್ವಾನರಾದ ಕುಮಾರಗುರು ತಂತ್ರಿ, ವಾಸುದೇವ ಭಟ್​ ಪಾವಂಜೆ, ವೆಂಕಟೇಶ ಆಚಾರ್ಯ ಪಡುಬಿದ್ರೆ, ಸ್ಕಂದಪ್ರಸಾದ ಭಟ್​ ಕಡಂದಲೆ, ಡಾ. ಷಣ್ಮುಖ ಹೆಬ್ಬಾರ, ಡಾ. ಎನ್​.ವೆಂಕಟೇಶ ಆಚಾರ್ಯ ಬೆಂಗಳೂರು, ಅಖಿಲ ಭಾರತ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ. ಗೋವಿಂದ ಕುಲಕರ್ಣಿ, ಸಮಾಜ ಚಿಂತಕ ರೋಹಿತ ಚಕ್ರತೀರ್ಥ, ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್​ ಉಪಸ್ಥಿತರಿದ್ದರು.
Putthige 5
ಧಾರ್ಮಿಕ ಸಮಾವೇಶದಲ್ಲಿ ಸುಗುಣೇಂದ್ರ ಶ್ರೀಗಳು ಶ್ರೀಕೃಷ್ಣನ ವಿವಿಧ ಅಲಂಕಾರಗಳ ಭಾವಚಿತ್ರವುಳ್ಳ ಯುಗಾದಿ ಕ್ಯಾಲೆಂಡರ್​ ಬಿಡುಗಡೆ ಮಾಡಿದರು.

ಪುತ್ತಿಗೆ ವಿದ್ಯಾರ್ಥಿಗಳು ವೇದಘೋಷ ನಡೆಸಿದರು. ಪುತ್ತಿಗೆ ವಿದ್ಯಾಪೀಠದ ಪ್ರಾಚಾರ್ಯ ಶ್ರೀನಿಧಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್​ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸುನೀಲ ಆಚಾರ್ಯ ವಂದಿಸಿದರು.

ಸನಾತನ ಧರ್ಮ ನಾಶಕ್ಕೆ ವ್ಯವಸ್ಥಿತ ಪಿತೂರಿ

Putthige 6
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ವ್ಯವಸ್ಥಿತವಾಗಿ ಹಿಂದು ಧರ್ಮ ಹಾಗೂ ಸನಾತನ ಧರ್ಮ ನಾಶ ಮಾಡಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಅಮೆರಿಕದ ಯುನಿವರ್ಸಿಟಿಯಲ್ಲೂ ಸಹ ಹಿಂದು ಧರ್ಮದ ನಾಶಕ್ಕೆ ಎಲ್ಲ ರೀತಿಯ ಕುತಂತ್ರ ನಡೆಯುತ್ತಿದ್ದು, ಅದರಿಂದ ನಮ್ಮ ಭಾರತದ ಮಕ್ಕಳು ಪ್ರಭಾವಿತರಾಗುತ್ತಿದ್ದಾರೆ. ಮುಂದಿನ ಜನಾಂಗದ ಪರಿಸ್ಥಿತಿ ಹೇಗಿರಬಹುದೆಂದು ಯೋಚಿಸಿದಾಗ ಮನಸ್ಸಿಗೆ ಆಘಾತವಾಗುತ್ತಿದೆ. ಹೀಗಾಗಿ ಬ್ರಾಹ್ಮಣ ಮಕ್ಕಳನ್ನು ಪ್ರಧಾನವಾಗಿಟ್ಟುಕೊಂಡು ಅವರನ್ನು ಧರ್ಮ ಮಾರ್ಗದಲ್ಲಿ ಸಾಗುವಂತೆ ಮಾಡಲು ಪುತ್ತಿಗೆ ಮಠದಿಂದ ಎಲ್ಲ ರೀತಿಯ ಕಾರ್ಯ ಮಾಡಲಾಗುತ್ತಿದೆ. ವಾರ್ಷಿಕೋತ್ಸವಗಳು ಸಂಭ್ರಮ, ಸಡಗರದಲ್ಲಿ ಮೈಮರೆಯದೆ ನಮ್ಮನ್ನೆಲ್ಲ ಚಿಂತನೆಗೆ ಒಳಪಡುವ ರೀತಿಯಲ್ಲಿರಬೇಕು. ಇಂತಹ ಆಚರಣೆ ಮಾಡುವಾಗ ಮುಂದಿನ ಪೀಳಿಗೆ ಹೇಗಿರಬೇಕೆಂದು ಯೋಚಿಸುವುದೂ ಬಹಳ ಮುಖ್ಯ. ಹೀಗಾಗಿಯೇ ಮಕ್ಕಳಲ್ಲಿ ಧಾರ್ಮಿಕ ಪ್ರವತ್ತಿ ಬೆಳೆಯಲು ವಿದ್ವಾಂಸರಿಂದ ಚಿಂತನ-ಮಂಥನ ಆಯೋಜಿಸಲಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಮ

ಸುಗುಣೇಂದ್ರ ಶ್ರೀ, ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ ಹಾಗೂ ವಿದ್ಯಾಪ್ರಸನ್ನ ಶ್ರೀಗಳ ಉಪಸ್ಥಿತಿಯಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ 6:30ಕ್ಕೆ ಪುತ್ತಿಗೆ ವಿದ್ಯಾಪೀಠದ ಹಳೆಯ ವಿದ್ಯಾರ್ಥಿಗಳಿಂದ 51 ಕುಂಡಗಳಲ್ಲಿ ವ್ಯಾಸ ಯಾಗ ಜರುಗಿತು. 'ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನೆ ಹೇಗೆ?' ಎಂಬ ವಿಚಾರಗೋಷ್ಠಿ, ಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ ಸಮಾರಂಭ, ಕರಾವಳಿ ಸಂಸ್ಕೃತ ಪ್ರತಿಭಾ ಪ್ರದರ್ಶನ ಆಯೋಜಿಸಲಾಗಿತ್ತು. 'ಮಕ್ಕಳಲ್ಲಿ ಸಂಸತಿಯ ಜಾಗೃತಿ ಹೇಗೆ?' ಮತ್ತು 'ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನ ಹೇಗೆ?' ಎಂಬ ವಿಷಯ ಕುರಿತು ಚಿಂತನ-ಮಂಥನ, ಶ್ರೀ ಪುತ್ತಿಗೆ ಸುಗುಣ ಸ್ಕೂಲ್​ನ ಪ್ರಥಮ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಮತ್ತು ಚಿಣ್ಣರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆದವು.

ವೈದಿಕ ವೇಷ-ಭೂಷಣದ ಕುರಿತು ಕೀಳರಿಮೆ ಬೇಡ. ಈ ಉಡುಗೆಗೆ ಇರುವಷ್ಟು ಗೌರವ ಜಗತ್ತಿನಲ್ಲಿ ಬೇರಾವ ಉಡುಗೆಗೂ ಇಲ್ಲ. ನಾಸ್ತಿಕನೂ ಸಹ ಎದ್ದುನಿಂತು ಗೌರವ ನೀಡುತ್ತಾನೆ. ಬ್ರಾಹ್ಮಣರು ದೇವರ ಕೊಟ್ಟ ವಿಶೇಷ ಅವಕಾಶ ಹಾಗೂ ಅನುಗ್ರಹದಿಂದ ಜನಿಸಿದವರು. ಬ್ರಾಹ್ಮಣರು ಅಪರಾಧಿಗಳಲ್ಲ. ಸಮಾಜ ಸುಸ್ಥಿತಿಯಲ್ಲಿರಬೇಕಾದರೆ ಭಗವಂತನ ಸೂಚನೆಯಂತೆ ಬ್ರಾಹ್ಮಣರು ಸರಿಯಾಗಿರಬೇಕು. ಪುರೋಹಿತ ಎಂದರೆ ಸಮಾಜ, ಜಗತ್ತನ್ನು ಮುನ್ನಡೆಸುವವರು ಎಂದರ್ಥ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net