೪೦ನೇ ವಾರ್ಷಿಕೋತ್ಸವ: ಗಮನ ಸೆಳೆದ ಕ್ರೀಡಾಕೂಟ

MDK02
Published on

ಮಡಿಕೇರಿ: ಗಾಳಿಬೀಡು ಅಡ್ಕದಬಾಣೆ ಸ್ನೇಹಿತರ ಯುವಕ ಸಂಘದ ೪೦ನೇ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ, ಜಿಲ್ಲಾ ಮಟ್ಟದ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿ ಇತ್ತಿಚೆಗೆ ನಡೆಯಿತು.


ನೆಹರು ಯುವ ಕೇಂದ್ರ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ ಕೊಡಗು, ತಾಲೂಕು ಯುವ ಒಕ್ಕೂಟ ಮಡಿಕೇರಿ ಹಾಗೂ ಗಾಳಿಬೀಡು ಅಡ್ಕದಬಾಣೆ ಸ್ನೇಹಿತರ ಯುವಕ ಸಂಘ, ಶ್ರೀ ಮಾದುರಪ್ಪ ಶ್ರೀನಿಧಿ ಮತ್ತು ತ್ರಿವೇಣಿ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಗಾಳಿಬೀಡು ಅಡ್ಕದಬಾಣೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.


ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗವಹಿಸಿದ್ದು, ಬ್ಲ್ಯಾಕ್ ಪ್ಯಾಂತರ್ಸ್‌ ದೇವಸ್ತೂರು ತಂಡ ಪ್ರಥಮ ಮತ್ತು ಸಿಸಿಎಲ್ ಗಾಳಿಬೀಡು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಥ್ರೋಬಾಲ್ ಪಂದ್ಯಾವಳಿಯಲ್ಲಿ ವನಶ್ರೀ ವರಡಾತಂಡ ಪ್ರಥಮ, ಗಾಳಿಬೀಡು ಫ್ರೆಂಡ್ಸ್ ದ್ವಿತೀಯ ಬಹುಮಾನ ಗೆದ್ದುಕೊಂಡಿತು. ಮಕ್ಕಳು ಹಾಗೂ ಹಿರಿಯರು ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇದೇ ಸಂದರ್ಭ ರಕ್ತದಾನ ಶಿಬಿರ ನಡೆಯಿತು.


ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಮಾಜ ಸೇವಕ ಡಾ.ಮಂಥರ್ ಗೌಡ, ೪೦ ವರ್ಷಗಳ ಸುದೀರ್ಘ ಅವಧಿಯಿಂದ ಸಂಘ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಯುಗಾದಿ ಹಬ್ಬ ಮತ್ತು ಗ್ರಾಮೀಣ ಕ್ರೀಡೆಗಳ ಕುರಿತು ವಿವರಿಸಿದರು.


೨೦೨೧-೨೨ನೇ ಸಾಲಿನ ೧೦ನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಬಿ.ಸಿ.ಟೀನಾ ಹಾಗೂ ಎಂ.ಎನ್.ಪೂರ್ಣಿಮ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯರಾದ ಬಿ.ಎಂ.ದೇವಮ್ಮ ಹಾಗೂ ಎಂ.ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್, ಖಜಾಂಚಿ ಮೋಹನ್, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ದಿಲೀಪ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net