

ಕಾರವಾರ:ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಯನ್ನು ಅಕ್ಟೋಬರ್‌ನಿಂದ ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಆಧಾರ ಆಧಾರಿತ ಪಾವತಿ ಮಾಡಲು ಸರ್ಕಾರ ನಿರ್ಧರಿಸಿದೆ. ಫಲಾನುಭವಿಗಳು ತಮ್ಮ ಖಾತೆಗಳಿಗೆ ಆಧಾರ ಜೋಡಣೆ ಮಾಡಿಸಿಕೊಳ್ಳುವಂತೆ ಇಲಾಖೆ ಸೂಚನೆ ನೀಡಿದೆ.
ವೃದ್ಧಾಪ್ಯ ವೇತ, ವಿಧಾವಾ ವೇತ ಮುಂತಾದ ವಿವಿಧ ಪಿಂಚಣಿ ಯೋಜನೆಯನ್ನು ಪಡೆಯುತ್ತಿರುವ 1,58 ಲಕ್ಷ ಜನ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾರೆ. ಇದುವರೆಗೆ ಅವರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಇದೇ ಅಕ್ಟೋಬರ್‌ನಿಂದ ಪಿಂಚಣಿ ನಿರ್ದೇಶನಾಲಯವು ಆಧಾರ ಆಧಾರಿತ ಹಣ ವರ್ಗಾವಣೆಗೆ ಸೂಚಿಸಿದೆ. ಆಧಾರ ಲಿಂಕ್ ಆಗದೇ ಇರುವ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ.
ಇದನ್ನೂ ಓದಿ:ಕಾಲೇಜ್ ಬೀಗ ಮುರಿದು 2.16 ಲಕ್ಷ ನಗದು ಕಳುವು
ಜಿಲ್ಲೆಯಲ್ಲಿ ಆಧಾರ ಲಿಂಕ್ ಆಗದೇ ಇರುವ ಒಟ್ಟು 4,081 ಫಲಾನುಭವಿಗಳಿದ್ದಾರೆ. ಅವರ ಪಟ್ಟಿಯನ್ನು ಫಲಾನುಭವಿಗಳ ಪಟ್ಟಿಯನ್ನು ನಿರ್ದೇಶನಾಲಯದಿಂದ ಕಳುಹಿಸಿಕೊಡಲಾಗಿದೆ. ಕಾರವಾರ-342, ಅಂಕೋಲಾ-202, ಕುಮಟಾ-339, ಹೊನ್ನಾವರ-554, ಭಟ್ಕಳ-510, ಶಿರಸಿ-395, ಸಿದ್ದಾಪುರ-143, ಯಲ್ಲಾಪುರ-24, ಮುಂಡಗೋಡ-405, ಹಳಿಯಾಳ-314, ಜೊಯಿಡಾ-234, ದಾಂಡೇಲಿ-402 ಫಲಾನುಭವಿಗಳಿದ್ದಾರೆ.
ಅವರ ಹೆಸರು ಹಾಗೂ ಮಾಹಿತಿಯು ಸಂಬಂಧಿಸಿದ ತಾಲೂಕು ಕಚೇರಿಗಳಿಗೆ ಕಳಿಸಿಕೊಡಲಾಗಿದೆ. ಪಟ್ಟಿಯಲ್ಲಿರುವ ಫಲಾನುಭವಿಗಳು ತಮ್ಮ ಖಾತೆ ಇರುವ ಬ್ಯಾಂಕ್, ಅಂಚೆ ಕಚೇರಿಗೆ ತೆರಳಿ ತುರ್ತಾಗಿ ಈ ಕೂಡಲೇ ತಮ್ಮ ಆಧಾರ ನಂಬರನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸುವ ಬಗ್ಗೆ, ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸುವ ಬಗ್ಗೆ ಹಾಗೂ ಬ್ಯಾಂಕ್, ಅಂಚೆ ಕಚೇರಿ ಖಾತೆಯು ಚಾಲನೆಯಲ್ಲಿಲ್ಲದಿದ್ದರೆ ಅದನ್ನು ಚಾಲನೆ ಮಾಡಿಸಲು ಕ್ರಮ ವಹಿಸಬೇಕು. ಸೆ. 30 ರೊಳಗೆ ಈ ಕಾರ್ಯ ಆಗದೇ ಇದ್ದಲ್ಲಿ ಅಕ್ಟೋಬರ್‌ನಿಂದ ಪಿಂಚಣಿ ಜಮಾ ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.