400 ಕೋಟಿ ರೂ. ವಹಿವಾಟು: ಸಹಕಾರಿ ಸಂಘಗಳಿಗೆ ಶಿರಸಿಯ ಟಿಎಸ್‌ಎಸ್ ಮಾದರಿ

WEB SEEGGGR
Published on

ಸಾಗರ: ಸಹಕಾರಿ ಸಂಘಗಳಿಗೆ ಶಿರಸಿಯ ಟಿಎಸ್‌ಎಸ್ ಮಾದರಿಯಾಗಿದೆ. ಈಗಾಗಲೇ 400 ಕೋಟಿ ರೂ. ವಹಿವಾಟು ನಡೆಸುವ ಟಿಎಸ್‌ಎಸ್ ಕಾಯಕವನ್ನು ನಾವೆಲ್ಲ ಮೆಚ್ಚಿಕೊಂಡು ಸಹಕಾರಿ ಸಂಸ್ಥೆಗಳನ್ನು ನಂಬಿಕೆಯ ಆಧಾರದ ಮೇಲೆ ವ್ಯವಸ್ಥಿತವಾಗಿ ಕಟ್ಟಬೇಕು ಎಂದು ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುವವರಲ್ಲಿ ಸೇವಾ ಮನೋಭಾವ ಇರಬೇಕು. ಪ್ರತಿಯೊಬ್ಬರಿಗೂ ಆಸೆ ಇರಬೇಕೆ ವಿನಾ ದುರಾಸೆ ಇರಬಾರದು. ಸಂಸ್ಥೆಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಆಸೆಯೊಂದಿಗೆ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂದರು.

ಷೇರುದಾರರಿಂದ ಹಣ ಸಂಗ್ರಹಿಸಿ ಅದನ್ನು ಸಂಕಷ್ಟದಲ್ಲಿರುವವರಿಗೆ ನೀಡಿ ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಸಹಕಾರಿ ಸಂಸ್ಥೆಗಳು ಮಾದರಿಯಾಗಿ ಕೆಲಸ ಮಾಡಿದರೆ ಹೆಚ್ಚು ಜನರ ಮೆಚ್ಚುಗೆ ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರು ವ್ಯವಸ್ಥಿತವಾಗಿ ತೊಡಗಿಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಡಿ.ಬಿ.ಕಾರಿಯಪ್ಪ ಮಾನತಾಡಿ, ಕಳೆದ 9 ವರ್ಷಗಳ ಹಿಂದೆ ಪ್ರಾರಂಭಿಸಿದ ನಾರಾಯಣಗುರುಗಳ ಹೆಸರಿನ ಸಹಕಾರ ಸಂಘ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. 507 ಸದಸ್ಯ ಬಲ ಹೊಂದಿದ್ದು ಲಾಭಾಂಶ ಸಹ ವಿತರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಷೇರುದಾರ ಸ್ನೇಹಿಯಾಗಿ ಇನ್ನಷ್ಟು ಯೋಜನೆ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net