400 ಕ್ವಿಂಟಾಲ್ ಪಡಿತರ ಮಂಗಮಾಯ!

0102
Published on

ತೆಲಸಂಗ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡಬಗ್ಗರು ತುತ್ತು ಅನ್ನಕ್ಕೂ ಪರಿತಪಿಸುತ್ತಿರುವ ವಿಷಮ ಗಳಿಗೆಯಲ್ಲಿ ತೆಲಸಂಗ ಗ್ರಾಮದ ಪಿಕೆಪಿಎಸ್ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನ್ಯಾಯಬೆಲೆ ಅಂಗಡಿಯಲ್ಲಿ 3 ತಿಂಗಳ ಅವಧಿಯಲ್ಲಿ ವಿತರಿಸಬೇಕಿದ್ದ 400 ಕ್ವಿಂಟಾಲ್ ಪಡಿತರ ಧಾನ್ಯ ಮಾಯವಾದ ಘಟನೆ ಬೆಳಕಿಗೆ ಬಂದಿದೆ.

ನ್ಯಾಯಬೆಲೆ ಅಂಗಡಿಯಿಂದ ಪಡಿತರ ವಿತರಿಸಿಲ್ಲ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ ಬುಧವಾರ ತಹಸೀಲ್ದಾರ್ ದುಂಡಪ್ಪ ಕೋಮಾರ ಪಿಕೆಪಿಎಸ್‌ಗೆ ಭೇಟಿ ನೀಡಿ ಪರಿಶೀಲಿಸಿದಾಗ ಪಡಿತರ ವಿತರಣೆಯಲ್ಲಾದ ಗೋಲ್‌ಮಾಲ್ ಬೆಳಕಿಗೆ ಬಂದಿದೆ.

ಗೋದಾಮು ಖಾಲಿ ಇದೆ. ಕಾರ್ಡ್‌ದಾರರಿಗೆ ದೊರೆಯಬೇಕಾದ ರೇಷನ್ ಸರ್ಕಾರದಿಂದ ಅಂಗಡಿಗೆ ತಲುಪಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ರೇಷನ್ ಕೂಡ ಹಂಚಿಲ್ಲ. ಲಾಕ್‌ಡೌನ್ ನಿಮಿತ್ತ ಏಪ್ರಿಲ್ ಮತ್ತು ಮೇ ತಿಂಗಳ ರೇಷನ್ ತಕ್ಷಣ ಹಂಚಲು ಸರ್ಕಾರ ನೀಡಿದೆ. ಹಾಗಿದ್ದರೂ ಜನರಿಗೆ ರೇಷನ್ ದೊರೆತಿಲ್ಲ. ತುರ್ತು ಸಂದರ್ಭದಲ್ಲಿ ರೇಷನ್ ಮಾಯವಾಗಿದ್ದು ನಾಚಿಕೆಗೇಡು ಎಂದು ತರಾಟೆಗೆ ತೆಗೆದುಕೊಂಡರು.ತಕ್ಷಣ ಪಡಿತರ ವಿತರಿಸಿ. ಇಲ್ಲ ಕಂಬಿ ಎಣಿಸಲು ಸಿದ್ಧರಾಗಿ ಎಂದು ತಹಸೀಲ್ದಾರ್ ಅವರು ಪಿಕೆಪಿಎಸ್ ಕಾರ್ಯದರ್ಶಿಗೆ ಎಚ್ಚರಿಕೆ ನೀಡಿದರು.

ಎಲ್ಲಿ ಹೋಯ್ತು ರೇಷನ್?: ತಹಸೀಲ್ದಾರ್ ತರಾಟೆಗೆ ಗರಬಡಿದಂತಾದ ಕಾರ್ಯದರ್ಶಿ ಮನೋಹರ ಬಡಿಗೇರ, 20 ವರ್ಷಗಳ ಹಿಂದೆ ದೇವಸ್ಥಾನಕ್ಕೆ ರೇಷನ್ ನೀಡುತ್ತ ಬಂದಿದ್ದಾರೆ ಎಂದು ಹೇಳಿ ಜಾರಿಕೊಳ್ಳಲೆತ್ನಿಸಿದರು. 400 ಕ್ವಿಂಟಾಲ್‌ನಷ್ಟು ಪಡಿತರ ಇಲ್ಲವಾಗಿರುವುದು ತಮಾಷೆ ಅಲ್ಲ. ರೇಷನ್ ಏನಾಯ್ತು ಬಾಯ್ಬಿಡು ಎಂದು ದಂಡಾಧಿಕಾರಿಗಳು ಅದೆಷ್ಟೇ ಕೇಳಿದರೂ ಕಾರ್ಯದರ್ಶಿಯಿಂದ ಸಮರ್ಪಕ ಉತ್ತರ ಬರಲಿಲ್ಲ.

ದೂರುಗಳ ಸುರಿಮಳೆ: 2050 ಜನ ಪಡಿತರದಾರರಿಗೆ 4 ದಿನ ಮಾತ್ರ ಪಡಿತರ ವಿತರಿಸುತ್ತಾರೆ. ತಿಂಗಳಪೂರ್ತಿ ಅಂಗಡಿ ತೆರೆಯುವುದಿಲ್ಲ. ಒಟಿಪಿ ಹಂಚಿಕೆಯಾದ ದಿನದಿಂದೇ ರೇಷನ್ ಕೊಡುವುದಿಲ್ಲ. 3ತಿಂಗಳಿಂದ ರೇಷನ್ ಕೊಟ್ಟಿಲ್ಲ. ಇಷ್ಟಾಗಿಯೂ ಮೇಲಧಿಕಾರಿಗಳು ಮೌನವಹಿಸಿದ್ದು ಅನುಮಾನ ಮೂಡಿಸಿದೆ. ಇದೆಲ್ಲ ಸಮಗ್ರ ತನಿಖೆಯಾಗಿ ಫಲಾನುಭವಿಗಳಿಗೆ ಪಡಿತರ ದೊರೆಯಬೇಕು. ಇದು ಕೇವಲ ತೆಲಸಂಗ ನ್ಯಾಯಬೆಲೆ ಅಂಗಡಿಯ ಸಮಸ್ಯೆ ಮಾತ್ರವಲ್ಲ.

ತಾಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳು ತಿಂಗಳಪೂರ್ತಿ ಪಡಿತರ ವಿತರಿಸುವುದಿಲ್ಲ. ಇಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಂಡು ವ್ಯವಸ್ಥೆ ಸರಿಪಡಿಸಬೇಕೆಂದು ತಹಸೀಲ್ದಾರ್ ಅವರನ್ನು ಜನರು ಒತ್ತಾಯಿಸಿದರು.
ಮುಖಂಡರಾದ ಐ.ಎಲ್.ಕುಮಠಳ್ಳಿ, ಕಂದಾಯ ನಿರೀಕ್ಷಕ ಬಿ.ವೈ.ಹೊಸ್ಕೇರಿ, ಆಹಾರ ಶಿರಸ್ತೇದಾರ ಬಿರಾದರಪಾಟೀಲ, ಆಹಾರ ನಿರೀಕ್ಷಕ ಶರಣಪ್ಪ ಬಾಗೇವಾಡಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ.ಇರಕರ, ಪಿಡಿಒ ಬೀರಪ್ಪ ಕಡಗಂಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net