

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಸಂತ್ರಸ್ತ ರೈತರ ಸಭೆ ರೈತಸಂಘ ಹಸಿರು ಸೇನೆಯ ನೇತೃತ್ವದಲ್ಲಿ ಶನಿವಾರ ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ನಡೆಯಿತು.
400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಹಾದು ಹೋಗುವುದರಿಂದ ಜಿಲ್ಲೆಯ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಹಲವಾರು ಬಾರಿ ಪ್ರತಿಭಟಿಸಿದರೂ ಸೂಕ್ತ ನ್ಯಾಯ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿ, ಚಳವಳಿ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
2022ಕ್ಕೆ ಟೆಲಿಗ್ರಾಫ್ ಆಕ್ಟ್ಗೆ ಚಾಲನೆ ನೀಡಲಾಗಿದೆ. ಟೆಲಿಗ್ರಾಫ್ ಆಕ್ಟ್ನಂತೆ ಸಂತ್ರಸ್ತ ರೈತರಿಗೆ ಪರಿಹಾರ ಕೊಟ್ಟ ಬಳಿಕವೇ ಕಾಮಗಾರಿ ಪೂರ್ಣವಾಗುವುದು. ನಮ್ಮ ಭೂಮಿಯನ್ನು ಯಾವುದೇ ಕಾರಣಕ್ಕೂ ಕಂಪನಿಗೆ ನೀಡುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳಬೇಕು. ಯಾರೂ ವೈಯಕ್ತಿಕವಾಗಿ ಕಂಪನಿ ಜತೆ ವ್ಯವಹಾರ ನಡೆಸಬಾರದು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಸಂತ್ರಸ್ತ ರೈತರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಮೂಲಕ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು.
ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಜಿಲ್ಲಾ ಸಲಹೆಗಾರ ಮುರುವ ಮಹಾಬಲ ಭಟ್, ಬಂಟ್ವಾಳ ತಾಲೂಕು ರೈತರ ಸಂಘ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್, ರೈತ ಸಂಘ ಮುಖಂಡರಾದ ರೂಪೇಶ್ ರೈ ಅಲಿಮಾರ್, ವಿನೋದ್ ಭಟ್ ಪಾದೆಕಲ್ಲು, ಇಬ್ರಾಹಿಂ ಖಲಿಲ್, ಚಂದ್ರಹಾಸ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಚಿತ್ತರಂಜನ್, ರೋಹಿತಾಶ್ವ, ಸಂತ್ರಸ್ತ ರೈತರಾದ ಶಾಮ್ ವಿಟ್ಲ, ಕೃಷ್ಣಪ್ರಸಾದ್ ತಂತ್ರಿ, ಅಶೋಕ್, ಜೆಸಿಂತಾ. ಮೊದಲಾದವರು ಉಪಸ್ಥಿತರಿದ್ದರು. ಇನ್ನಾ, ಕಲ್ಲಮುಂಡ್ಕೂರು, ವಿಟ್ಲ, ಬಂಟ್ವಾಳ ಭಾಗದ ಸಂತ್ರಸ್ತ ರೈತರು ಭಾಗವಹಿಸಿದ್ದರು.