

ಮಾಗಡಿ: ಬಾಚೇನಹಟ್ಟಿ ಗ್ರಾಮ ಪಂಚಾಯಿತಿಯನ್ನು ಕಸರಹಿತವನ್ನಾಗಿ ಮಾಡಲು 40 ಲಕ್ಷ ರೂ. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಬಾಚೇನಹಟ್ಟಿ ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮಅಶೋಕ್ ಹೇಳಿದರು.
ಕಸಬಾ ಹೋಬಳಿ ಬಾಚೇನಹಟ್ಟಿ ಗ್ರಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಘಟಕ ನಿರ್ಮಾಣದ ಬಗ್ಗೆ ಈಗಾಗಲೇ ಸಾಕಷ್ಟು ಸಭೆಗಳನ್ನು ನಡೆಸಿ ಯೋಜನೆಯ ಬಗ್ಗೆ ಕಾರ್ಯತಂತ್ರ ರೂಪಿಸಲಾಗಿದೆ, ಘಟಕ ನಿರ್ಮಾಣಕ್ಕೆ 40 ಲಕ್ಷ ರೂ. ಬೇಡಿಕೆ ಇಟ್ಟಿದ್ದು ಈಗ 10 ಲಕ್ಷ ರೂ. ಮಂಜೂರಾಗಿದೆ, ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೂ ಒಣ ಕಸ, ಹಸಿ ಕಸ ಹಾಕಲು ಎರಡು ಕಸದ ಬುಟ್ಟಿ ನೀಡಲಾಗುವುದು ಎಂದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಇಲ್ಲದವರಿಗೆ ಹೆಚ್ಚುವರಿಯಾಗಿ ಆಶ್ರಯ ಯೋಜನೆಯಡಿ 100 ಮನೆ ನೀಡುವಂತೆ ವಸತಿ ಸಚಿವ ಸೋಮಣ್ಣ ಅವರಿಗೆ ಮನವಿ ಮಾಡಲಾಗಿದೆ ಎಂದರು. ಕಾರ್ಯದರ್ಶಿ ರಾಮಚಂದ್ರಯ್ಯ ಮಾತನಾಡಿ, 2020-21 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಬೇಕಾಗಿದೆ. ಅಧಿಕಾರಿಗಳು ಸಭೆಗೆ ಭಾಗವಹಿಸದಿರುವುದರಿಂದ 20 ಅಂಶದ ಕಾರ್ಯಕ್ರಮ ಅನುಷ್ಠಾನ ಮಾಡುವುದಾದರೂ ಹೇಗೆ ಎಂದು ಸಭೆಯಲ್ಲಿ ಕೆಲ ಅಧಿಕಾರಿಗಳನ್ನು ಪ್ರಶ್ನಿಸಿ, ಒಂದು ಭಾರಿ ಸಭೆ ಮಾಡಲು ಪಂಚಾಯಿತಿಗೆ 20 ಸಾವಿರ ರೂ. ಖರ್ಚಾಗುತ್ತದೆ, ಇದರಿಂದ ಜನರ ತೆರಿಗೆ ಹಣ ನಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಮರಿಯಪ್ಪ, ಸದಸ್ಯರಾದ ರಂಗಸ್ವಾಮಿ, ದೈತಪ್ಪ, ಅಶ್ವಿನಿಭಾಯಿ, ಶೋಭಾ, ಪ್ರೇಮಕುಮಾರಿ, ನಾಗುಭಾಯಿ, ಮುಖಂಡರಾದ ಆಶೋಕ್, ಸೇವಾನಾಯ್ಕ, ಅಧಿಕಾರಿಗಳಾದ ಸುಲ್ತಾನ್ ಬಾಬಾ, ಯೋಗೇಶ್, ಡಾ.ಲಕ್ಷ್ಮೀಕಾಂತ, ಚಿಕ್ಕಣ್ಣ ಇತರರು ಇದ್ದರು.
ಕೆಡಿಪಿ ಸಭೆಗಳಿಗೆ ಇಲಾಖೆ ಅಧಿಕಾರಿಗಳು ಭಾಗವಹಿಸದಿರುವುದರಿಂದ ನಾಗರಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಭೆಗೆ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿಲ್ಲ.
ಕಾಂತರಾಜು, ಪಿಡಿಒ