

ಮೈಸೂರು: ತಿ.ನರಸೀಪುರ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ ಉಂಟು ಮಾಡಿರುವ ಚಿರತೆ ಸೆರೆಗಾಗಿ ಕಬ್ಬು ಕಟಾವು ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವವನ್ನು ಪುರಸ್ಕರಿಸಿರುವ ಡಿಸಿ ಈ ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಚಿರತೆ ಹಾವಳಿ ಅಧಿಕವಾಗಿದೆ. ಅಲ್ಲಿ ಸಾರ್ವಜನಿಕರ ಹಾಗೂ ಜೀವಸಂಕುಲಗಳ ಪ್ರಾಣಹಾನಿ ತಡೆಯಲು ಮತ್ತು ಸಾರ್ವಜನಿಕರಲ್ಲಿ ಭಯ ಹೋಗಲಾಡಿಸಲು ಚಿರತೆಯನ್ನು ಸೆರೆಹಿಡಿಯಬೇಕಾಗಿದೆ. ಆದ್ದರಿಂದ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೋರಿಕೆಯಂತೆ 23 ಗ್ರಾಮ ಪಂಚಾಯಿತಿಗಳಿಗೆ ಒಳಪಡುವ 40 ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ಆದ್ಯತೆ ಮೇಲೆ ಬೇಗನೆ ಕಟಾವು ಮಾಡಿ ಕಾರ್ಖಾನೆಗೆ ಸಾಗಣೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದ್ದಾರೆ.
ತುರುಗನೂರು, ಯಾಚನಹಳ್ಳಿ, ಮಾರಗೌಡನಹಳ್ಳಿ, ದಾಸೇಗೌಡನಹಳ್ಳಿ, ಸಿ.ವಿ.ಕೊಪ್ಲು, ಕೇತುಪುರ, ಉಕ್ಕಲಗೆರೆ, ಎಂ.ಎಲ್.ಹುಂಡಿ, ಸೋಮನಾಥಪುರ, ಕಗ್ಗಲೀಪುರ, ದೊಡ್ಡಬಾಗಿಲು, ಹೊರಳಹಳ್ಳಿ, ಕರುಗಹಳ್ಳಿ, ಚಿದರವಳ್ಳಿ, ಎಸ್.ದೊಡ್ಡಪುರ, ಬೋಳೇಗೌಡನಹುಂಡಿ, ಕೆಂಪನಪುರ, ರಾಮೇಗೌಡನಪುರ, ಚಿಕ್ಕಕಲ್ಕುಣಿ, ನರಗ್ಯಾತನಹಳ್ಳಿ, ಹಲವಾರ, ಚಿಟಿಗಯ್ಯನಕೊಪ್ಲು, ನಾಗಲಗೆರೆ, ಮುಸುವಿನಕೊಪ್ಲು, ಸೋಸಲೆ, ಬೆನಕನಹಳ್ಳಿ, ವೀರಪ್ಪೊಡೆಯರ್ ಹುಂಡಿ, ಕಾಳಬಸವನ ಹುಂಡಿ, ಕುರುಬಾಳನಹುಂಡಿ, ಗಾಡಿಜೋಗಿಹುಂಡಿ, ಮಾದಿಗಹಳ್ಳಿ, ಸುಜಲೂರು, ಹ್ಯಾಕನೂರು, ತುಂಬಲ, ಯರಗನಹಳ್ಳಿ, ಸೀಹಳ್ಳಿ, ಮಾದಾಪುರ, ಹಿರಿಯೂರು, ಮೂಗೂರು, ಕೂಡ್ಲೂರು ಸೇರಿದಂತೆ 40 ಗ್ರಾಮಗಳಿಗೆ ಆದೇಶ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಈ ಆದೇಶದ ಕುರಿತು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ಕಟಾವು ಮಾಡಿದ ಕಬ್ಬನ್ನು ಅರೆಯಲು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ಹೀಗಾಗಿ, ರೈತರು ನಿಗದಿತ ಸಮಯಕ್ಕೆ ಕಬ್ಬು ಕಟಾವು ಮಾಡಿ ಸಾಗಣೆ ಮಾಡಬೇಕು. ಆ ಮೂಲಕ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ನೆರವಾಗಬೇಕು ಎಂದು ಕೋರಿದರು.
ಹುಣಸೂರಿನಲ್ಲಿ ಡಿ.7ರಂದು ಹಮ್ಮಿಕೊಂಡಿರುವ ಹನುಮ ಜಯಂತಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜನರು ಕೂಡ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಬೇರೆಯವರಿಗೆ ತೊಂದರೆಯಾಗದಂತೆ ಹನುಮ ಜಯಂತಿ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.