ಜಿಲ್ಲೆಯಲ್ಲಿ 40 ಸಾವಿರ ಯುವ ಮತದಾರರು

DC Gurudatt Hegde
ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ
Published on

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 17.46 ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 40 ಸಾವಿರ ಯುವ ಮತದಾರರ ನೋಂದಣಿ ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ನಗರದಲ್ಲಿ ಬುಧವಾರ ಸಂವಾದ ನಡೆಸಿದ ಅವರು, ಈವರೆಗೂ ಈ ಮಟ್ಟದಲ್ಲಿ ಯುವ ಮತದಾರರ ನೋಂದಣಿ ಆಗಿರಲಿಲ್ಲ. ಮತದಾರರ ಸೆಳೆಯಲು ಎಂಟು ವಿಧಾನಸಭೆ ವ್ಯಾಪ್ತಿಯಲ್ಲಿ ಒಂದೊಂದು ಯುವ ಮತದಾರರ ಬೂತ್ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ಐಕಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಗುರುದತ್ತ ಹೆಗಡೆ ಮಾಹಿತಿ ನೀಡಿದರು.
80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ ಮಾಡುವುದಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಆದರೆ 80 ವರ್ಷ ಮೇಲ್ಪಟ್ಟವರಿಗೂ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಹಿಂದೆಲ್ಲ 100 ವರ್ಷ ಪೂರೈಸಿದವರೂ ಮತಗಟ್ಟೆಗಳಿಗೆ ಬಂದು ಮತ ಹಾಕಿದ ಉದಾಹರಣೆಗಳಿವೆ. ಇದು ಇತರೆ ಮತದಾರರಿಗೆ ಪ್ರೇರಣೆ ಆಗಲಿದೆ ಎಂಬುದು ನಮ್ಮ ಆಶಯ ಎಂದು ಹೇಳಿದರು.
ಪ್ರತಿ ಮತಕ್ಕೂ ಮೌಲ್ಯವಿದ್ದು, ಮತಗಟ್ಟೆಗೆ ಬಂದು ಮತ ಹಾಕಬೇಕು. ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನಕ್ಕೆ ಮಂಗನ ಕಾಯಿಲೆ ಅಡ್ಡಿಯಾಗುವುದಿಲ್ಲ. ಕೆಎಫ್‌ಡಿ ಸಂಬಂಧ ಪಿಎಚ್‌ಸಿಗಳಲ್ಲಿ ನಿಗಾ ವಹಿಸಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net