

ಗದಗ: ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ಹಾದಿಯಲ್ಲಿ ಸಾಗಿರುವ ಇಲ್ಲೊಂದಷ್ಟು ಅಭಿಮಾನಿಗಳು ನೇತ್ರದಾನದ ನಿರ್ಧಾರ ತಳೆದಿದ್ದು ಹೆಸರು ಕೂಡ ನೋಂದಾಯಿಸಿಕೊಂಡಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಂಡಾದ ಯುವಕರು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ. ಪುನೀತ್ ರಾಜಕುಮಾರ್ ಅಗಲಿಕೆಯ 11ನೇ ದಿನದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸಿದ ಈ ಅಭಿಮಾನಿಗಳು ಇದೇ ಸಂದರ್ಭದಲ್ಲಿ ನೇತ್ರದಾನದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಗಜೇಂದ್ರಗಡ ತಾಂಡಾದ ಬಂಜಾರಾ ಸಮುದಾಯದ 40ಕ್ಕೂ ಅಧಿಕ ಮಂದಿ ನೇತ್ರದಾನಕ್ಕೆ ಮುಂದಾಗಿದ್ದು, ಇಂದು ಇಲ್ಲಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬಳಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ದಾನಿಗಳಲ್ಲಿ ಯುವಕರು ಮಾತ್ರವಲ್ಲದೆ ಮಹಿಳೆಯರೂ ಇರುವುದು ವಿಶೇಷ.