ಎಲ್ಲೇ ಹೋದ್ರೂ 40 ಪರ್ಸೆಂಟ್‌ನದ್ದೇ ಸದ್ದು: ಸುರ್ಜೆವಾಲ ವ್ಯಂಗ್ಯ

e9a6fc1b-6262-4b96-a78a-bcc16ec74935 (1)
Published on

ಶಿವಮೊಗ್ಗ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲೇ ಹೋದರೂ ಶೇ.40 ಪರ್ಸೆಂಟ್ ಸರ್ಕಾರದ್ದೇ ಸದ್ದು. ಚಿಕ್ಕ ಮಗುವೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಪೇಸಿಎಂ ಎಂದು ಕರೆಯುತ್ತಿದೆ. 40 ಪರ್ಸೆಂಟ್ ಎಂದು ನಾವು ಮಾತ್ರ ಹೇಳುತ್ತಿಲ್ಲ. ಗುತ್ತಿಗೆದಾರರು, ಖಾಸಗಿ ಶಾಲೆಗಳ ಅಸೋಸಿಯೇಶನ್, ಮಠಾಧೀಶರೂ ಹೇಳುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದರು.

ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಗ್ಯಾರೆಂಟಿ ಕಾರ್ಡ್ ವಿತರಣೆ ಮತ್ತು ಜಿಲ್ಲಾಮಟ್ಟದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 8 ಬಾರಿ ರಾಜ್ಯಕ್ಕೆ ಬಂದಿದ್ದಾರೆ. ಗುತ್ತಿಗೆದಾರರು 40 ಪರ್ಸೆಂಟ್ ಕಮೀಷನ್ ಬಗ್ಗೆ 6 ತಿಂಗಳ ಹಿಂದೆಯೇ ಗುತ್ತಿಗೆದಾರರು ಪತ್ರ ಬರೆದಿದ್ದಾರೆ. ಆದರೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದರು.

ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಬಿಜೆಪಿ ಯಾವೊಬ್ಬ ನಾಯಕರೂ ಹೋಗಿ ಸಾಂತ್ವಾನ ಹೇಳಲಿಲ್ಲ. ಬೆಳಗಾವಿಯಲ್ಲಿ ರೋಡ್‌ಶೋ ಮಾಡಿದ ಪ್ರಧಾನಿ ಮೋದಿ ಅವರು ಸಂತೋಷ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರ ಅಹವಾಲು ಸ್ವೀಕರಿಸಿದ್ದರೆ ಕಮೀಷನ್ ಸಮಸ್ಯೆ ಇತ್ಯರ್ಥವಾಗುತ್ತಿತ್ತು ಎಂದರು.

ಬಿಜೆಪಿ ನಾಗರ ಹಾವಿದ್ದಂತೆ: ಬಿಜೆಪಿ ನಾಗರ ಹಾವಿದ್ದಂತೆ. ಅವರದ್ದೆ ಪಕ್ಷದ ಕಾರ್ಯಕರ್ತ ಕಮೀಷನ್ ಭೂತಕ್ಕೆ ಬಲಿ ಆದರೂ ಅವರ ಕುಟುಂಬವನ್ನು ರಕ್ಷಿಸಲಿಲ್ಲ. ಇವರು ರಾಜ್ಯದ ಸಾಮಾನ್ಯ ಜನರನ್ನು ಕಾಪಾಡುತ್ತಾರೆಯೇ ಎಂದು ಪ್ರಶ್ನಿಸಿದ ಸುರ್ಜೆವಾಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗುತ್ತಿಗೆದಾರ ಟಿ.ಎನ್.ಪ್ರಸಾದ್ ಎಂಬುವರು ಆತ್ಮಹತ್ಯೆ ಮಾಡಿಕೊಂಡರು. ಕಮೀಷನ್ ನೀಡದ್ದಕ್ಕೆ 90 ಕೋಟಿ ರೂ. ಬಿಡುಗಡೆ ಮಾಡದ್ದಕ್ಕೆ ನೋಂದು ಆತ್ಮಹತ್ಯೆ ಮಾಡಿಕೊಂಡರು ಎಂದು ದೂರಿದರು.

ಗುತ್ತಿಗೆದಾರರು, ಖಾಸಗಿ ಶಾಲೆಗಳ ಅನುದಾನ ಬಿಡುತ್ತಿಲ್ಲ. ಮಠಗಳಿಗೆ ನೀಡುತ್ತಿದ್ದ ಅನುದಾನದಲ್ಲೂ ಕಮೀಷನ್ ಕೇಳುತ್ತಿದ್ದಾರೆ. ಮೈಸೂರು ಸ್ಯಾಂಡಲ್ ಸೋಪನ್ನೂ ಬಿಡಲಿಲ್ಲ. ಪಿಎಸ್‌ಐ, ಜೂನಿಯರ್ ಇಂಜಿನಿಯರ್, ಅಸ್ಟಿಟೆಂಟ್ ಇಂಜಿನಿಯರ್, ಜಿಲ್ಲಾ ನೋಂದಣಾಧಿಕಾರಿಗಳು, ಡಿಸಿಸಿ ಬ್ಯಾಂಕ್ ನೇಮಕಾತಿ, ಕೆಎಂಎಫ್ ನೇಮಕಾತಿಯಲ್ಲೂ ಹಗರಣ ನಡೆಸಿದೆ. ಇದಕ್ಕಿಂತ ನಾಚಿಗೇಡಿನ ಸರ್ಕಾರ ಮತ್ತೊಂದಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net