

ಶಿವಮೊಗ್ಗ: ಕಾಂಗ್ರೆಸ್‌ನವರು ಬಿಜೆಪಿ ಮೇಲೆ ಮಾಡಿದ್ದ ಶೇ.40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಶುದ್ಧ ಸುಳ್ಳು. ಆಧಾರ ರಹಿತವಾಗಿದೆ ಎಂಬುದು ಲೋಕಾಯುಕ್ತ ವರದಿಯಲ್ಲಿ ಬಹಿರಂಗಗೊಂಡಿದೆ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.
ಗುತ್ತಿಗೆದಾರರ ಸಂಘದ ಆರೋಪ ನಿರಾಧಾರ ಎಂದು ಲೋಕಾಯುಕ್ತ ವರದಿಯಿಂದ ಸ್ಪಷ್ಟವಾಗಿದೆ. ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟ್‌ಗಳಾಗಿದ್ದಾರೆ. ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಜಗಜ್ಜಾಹಿರಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕರೊನಾ ಸಂದರ್ಭದಲ್ಲಿ ಪಿಪಿಇ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪ ಮಾಡಿದ್ದರು. ಇದೀಗ ವೆಂಟಿಲೇಟರ್ ಖರೀದಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವಾಗಿದ್ದು, ವೈಲ್ಯವನ್ನು ಡೈವರ್ಟ್ ಮಾಡಲು ಆರೋಪ ಹೊರೆಸುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ವೆಂಟಿಲೇಟರ್ ಮತ್ತು ಪಿಪಿಇ ಕಿಟ್‌ಗಳು ಸಿಗುತ್ತಿರಲಿಲ್ಲ. ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಂದಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಖರೀದಿಗಳ ಮೇಲೆ 4ಜಿ ವಿನಾಯಿತಿ ಕೂಡ ನೀಡಿತ್ತು ಎಂದರು.
ಬಿಜೆಪಿ ಮೂರು ತಂಡಗಳಾಗಿ ಮೂಡಾ ಮತ್ತು ವಕ್ಫ್ ಮಂಡಳಿ ಹಗರಣದ ಬಗ್ಗೆ ರಾಜ್ಯಾದ್ಯಂತ ಜನಜಾಗೃತಿ ಹೋರಾಟ ನಡೆಸಲಿದೆ. ಗುತ್ತಿಗೆದಾರರಿಗೆ 22-23ನೇ ಸಾಲಿನ ಬಿಲ್ಲುಗಳು ಇನ್ನೂ ಪಾವತಿಯಾಗಿಲ್ಲ, ಅವರ ಮೇಲೆ ಕಮಿಷನ್‌ಗಾಗಿ ಒತ್ತಡ ಹೇರಲಾಗುತ್ತಿದೆ ಎಂದರು. ಬಿಜೆಪಿಯಲ್ಲಿ ಯಾವುದೇ ಬಂಡಾಯವಿಲ್ಲ, ಕೆಲವು ಹಿರಿಯ ನಾಯಕರು ಪ್ರತೇಕವಾಗಿ ಹೋರಾಟ ನಡೆಸಲು ಮುಂದಾಗಿದ್ದು ನಿಜ. ಆದರೆ ಹಿರಿಯ ನಾಯಕರು ಅವರ ಮನವೊಲಿಸಿ ಎಲ್ಲವನ್ನು ಸರಿಪಡಿಸುತ್ತಾರೆ ಎಂದರು.