

ಮೈಸೂರು: ನಾಡಹಬ್ಬ ದಸರಾ ಆಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 40 ಕೋಟಿ ರೂ.ಅನುದಾನ ಬಳಕೆ ಮಾಡಲು ಅವಕಾಶ ನೀಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ., ಅರಮನೆ ಮಂಡಳಿಯಿಂದ 5 ಕೋಟಿ ರೂ. ನೀಡಲಿದ್ದು, ಉಳಿದ ಹಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರೆಗೆ 1.5 ಕೋಟಿ ರೂ. ಹಾಗೂ ಚಾಮರಾಜನಗರ ದಸರೆಗೆ 2 ಕೋಟಿ ರೂ. ಅನುದಾನ ನೀಡಲಾಗುತ್ತದೆ. ದಸರೆ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸುಮಾರು 41 ಕಿ.ಮೀ. ರಸ್ತೆಯನ್ನು ರಿಪೇರಿ ಮಾಡಿಸಿ, ಡಾಂಬರೀಕರಣ ಮಾಡಲಾಗುವುದು ಎಂದು ಹೇಳಿದರು.
ದೂರದಿಂದ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧೆಡೆಯಿಂದ ಮೈಸೂರಿಗೆ ವಿಮಾನ ಸಂಚಾರವನ್ನು ಮತ್ತೆ ಆರಂಭಿಸುವಂತೆ ಕೇಂದ್ರದ ವಿಮಾನಯಾನ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.
ನವರಾತ್ರಿಯ ದಿನದಲ್ಲಿ ಅರಮನೆಯ ಸುತ್ತಮುತ್ತ ಜನದಟ್ಟಣೆ ಇರುವುದರಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಮನೆಯ ಆಜುಬಾಜು ಶೂನ್ಯ ಸಂಚಾರ ವ್ಯವಸ್ಥೆ ಜಾರಿಗೆ ತರಲು ಆಲೋಚನೆ ನಡೆಸಲಾಗಿದೆ. ಇದನ್ನು ಮೊದಲು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ, ಸಾಧಕ-ಬಾಧಕ ನೋಡಿಕೊಂಡು ಪೂರ್ಣವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಯಾವ ಯಾವ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ ಎನ್ನುವುದನ್ನು ಸೂಕ್ತವಾಗಿ ಪರಿಶೀಲಿಸಿದ ಬಳಿಕ ಪಾರ್ಕಿಂಗ್ ಸ್ಥಳಗಳನ್ನು ನಿಗದಿಗೊಳಿಸಲಾಗುವುದು. ಅಲ್ಲದೆ ಕಿಲೋ ಮೀಟರ್ ದೂರದಿಂದ ನಡೆದುಕೊಂಡು ಬರಲು ವಯಸ್ಸಾದವರಿಗೆ, ಅಂಗವಿಕಲರಿಗೆ ಆಗುವುದಿಲ್ಲ. ಅಂತಹವರನ್ನು ಗಮನದಲ್ಲಿ ಇಟ್ಟುಕೊಂಡು ಮಿನಿ ಬಸ್ ಅಥವಾ ಬ್ಯಾಟರಿ ಚಾಲಿತ ವಾಹನ ಸೇವೆ ಜಾರಿಗೆ ಆಲೋಚಿಸಲಾಗುವುದು ಎಂದರು.
ದಸರಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಹೆಚ್ಚು ದಿನಗಳು ಇಲ್ಲದ ಕಾರಣ, ಟೆಂಡರ್ ಪ್ರಕ್ರಿಯೆಯಲ್ಲಿ 4ಜಿ ವಿನಾಯಿತಿ ನೀಡಲಾಗಿದೆ. ಇದರಿಂದ ಹರಾಜು ಪ್ರಕ್ರಿಯೆಗಳು ಬೇಗ ಆಗುತ್ತವೆ. ವಸ್ತುಪ್ರದರ್ಶನದಲ್ಲೂ ಉದ್ಘಾಟನೆ ದಿನವೇ ಎಲ್ಲ ಮಳಿಗೆಗಳು ಪೂರ್ತಿ ಭರ್ತಿಯಾಗಿರಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಅದೇ ರೀತಿ ಸರ್ಕಾರದ ಮಳಿಗೆಗಳೂ ಕೂಡ ಪೂರ್ತಿ ಕೆಲಸವನ್ನು ಮಾಡಿ, ಪ್ರದರ್ಶನಕ್ಕೆ ಸಿದ್ಧವಾಗಿರಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಯುವ ದಸರಾ ಈ ಬಾರಿ ಏಳು ದಿನ:
ದಸರಾದಲ್ಲಿ ಆಕರ್ಷಣೆಯಾಗಿರುವ ಯುವ ದಸರಾವನ್ನು ಈ ಬಾರಿ ಏಳು ದಿನ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಹಿಂದಿನ ವರ್ಷಗಳಲ್ಲಿ ಪ್ರದರ್ಶನ ನೀಡಿದ ಕಲಾವಿದರು ಪುನರಾವರ್ತನೆಯಾಗದಂತೆ ನಿಗಾ ವಹಿಸಿ ಪಟ್ಟಿಯನ್ನು ಸಿದ್ಧಗೊಳಿಸಬೇಕು. ಅದೇ ರೀತಿ ಯುವ ಸಂಭ್ರಮಕ್ಕೂ ಇದೇ ಸೂಚನೆಯನ್ನು ಪಾಲಿಸಬೇಕು ಎಂದು ಹೇಳಲಾಗಿದೆ. ಆಕರ್ಷಕ ದೀಪಾಲಂಕಾರ 21 ದಿನ ಮಾಡಲಾಗುತ್ತದೆ ಎಂದು ತಿಳಿಸಿದರು.
‘ಸ್ವಾತಂತ್ರೃ ಹೋರಾಟ ಹಾಗೂ ಸಂವಿಧಾನ’ ಧ್ಯೇಯ
ಮೈಸೂರು: ನಾಡಹಬ್ಬ ದಸರಾ ಒಂದೊಂದು ಧ್ಯೇಯ (ಥೀಮ್) ಅಡಿಯಲ್ಲಿ ಸಂಘಟಿಸಲಾಗುತ್ತಿದ್ದು, ಈ ಬಾರಿ ‘ಸ್ವಾತಂತ್ರೃ ಹೋರಾಟ ಹಾಗೂ ಸಂವಿಧಾನ’ ಧ್ಯೇಯ ಇರಲಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ದಸರಾವನ್ನು ಪ್ರಜಾಸತ್ತಾತ್ಮಕವಾಗಿ ಅಚರಣೆ ಮಾಡುವುದಲ್ಲದೆ ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವ, ಬಹುತ್ವದ ಭಾರತವನ್ನು ರಕ್ಷಣೆ ಮಾಡಿ, ಸೌಹಾರ್ದ ಕಾಪಾಡಿಕೊಳ್ಳಲು ಬೇಕಾದ ಅಂಶಗಳನ್ನು ಜನರಿಗೆ ತಿಳಿಸಲಾಗುವುದು ಎಂದರು.
ಅಲ್ಲದೆ ‘ಕರ್ನಾಟಕ’ ಎಂದು ನಾಮಕರಣವಾಗಿ 50 ವರ್ಷಗಳು ಆಗಿರುವುದರಿಂದ ಈ ಅಂಶಗಳನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರಗಳು, ವಸ್ತುಪ್ರದರ್ಶನದ ಮಳಿಗೆಯಲ್ಲಿ ಪ್ರದರ್ಶನ ಇರಲಿದೆ. ಕರ್ನಾಟಕ 50 ಸಂಭ್ರಮದ ಲಾಂಛನವನ್ನು ದಸರೆಯ ಸಂದರ್ಭದಲ್ಲಿ ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಿದರು.
ಸುತ್ತೂರು ಶ್ರೀಗಳನ್ನು ಆಹ್ವಾನಿಸುವಂತೆ ಶಾಸಕ ಟಿ.ಎಸ್.ಶ್ರೀವತ್ಸ ಸಲಹೆ ನೀಡಿದ್ದಾರೆ. ಉದ್ಘಾಟಕರ ಹೆಸರನ್ನು ಮುಖ್ಯಮಂತ್ರಿ ಅಂತಿಮಗೊಳಿಸಲಿದ್ದು, ಅವರ ವಿವೇಚನೆಗೆ ಬಿಡಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಮಹಿಷ ದಸರಾ ತೀರ್ಮಾನ ಇಲ್ಲ
ಮೈಸೂರು: ಮಹಿಷ ದಸರಾ ಮಾಡಲೇಬೇಕು ಅಥವಾ ಮಾಡಲೇಬಾರದು ಎನ್ನುವ ನಿರ್ಧಾರಗಳು ನನ್ನದ್ದಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಸಂವಿಧಾನದ ಪ್ರಕಾರ ಯಾರು ಯಾವ ಕಾರ್ಯಕ್ರಮಗಳನ್ನು ಮಾಡುತ್ತಾರೋ, ಬಿಡುತ್ತಾರೋ ಅದು ಅವರ ಹಕ್ಕು. ಆದರೆ ಶಾಂತಿಗೆ ಭಂಗ ಬಾರದಂತೆ ಎಲ್ಲರೂ ನಡೆದುಕೊಂಡು ಹೋದರೆ ಅಭ್ಯಂತರ ಇಲ್ಲ ಎಂದರು.
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರೊೃೀತ್ಸವದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಎರಡನೇ ಸಾಲಿನಲ್ಲಿ ಕೂರಿಸಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಶೋಭೆ ತರುವಂತದ್ದಲ್ಲ ಎಂದು ಪ್ರತಿಕ್ರಿಯಿಸಿದರು.
ಇದು ಅನಿರೀಕ್ಷಿತ ಬೆಳವಣಿಗೆ. ಇಂತಹ ಘಟನೆಗಳು ಮರುಕಳಿಸಬಾರದು. ಆಡಳಿತ ನಡೆಸುವ ಪಕ್ಷಗಳು ಸಾಂವಿಧಾನಿಕ ಅಂಶಗಳನ್ನು ತಿಳಿದುಕೊಂಡಿರಬೇಕು ಎಂದರು.