40 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ!

FotoJet (5)
Published on

 ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ | ಕೆಆರ್‌ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹ ಪ್ರಾರಂಭೋತ್ಸವ

ಮಾಗಡಿ : ತಾಲೂಕು ಆಸ್ಪತ್ರೆಯನ್ನು 40 ಕೋಟಿ ರೂ. ವೆಚ್ಚದಲ್ಲಿ ಆಧುನಿಕ, ಹೈಟೆಕ್ ಮಾದರಿಯಲ್ಲಿ ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ ಸೇರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ತಾಲೂಕಿನ ಸುಗ್ಗನಹಳ್ಳಿ ಕೆ.ಆರ್.ಎಸ್ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ, ಕೆಆರ್‌ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವಸತಿ ಗೃಹ ಪ್ರಾರಂಭೋತ್ಸವ ಹಾಗೂ ಜಾಣಗೆರೆ ರಾಮಯ್ಯ ವಿರಚಿತ ‘ಕರುಣಾಳು’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಾಗಡಿ ಸಾರ್ವಜನಿಕ ಆಸ್ಪತ್ರೆ ಹಳೆಯ ಕಟ್ಟಡ ಹಾಗೂ ವೈಜ್ಞಾನಿಕವಾಗಿ ಕಟ್ಟಡ ಇಲ್ಲದಿರುವ ಬಗ್ಗೆ ವೀಕ್ಷಿಸಿದ್ದು, ನೂತನ ಆಸ್ಪತ್ರೆ ಕಟ್ಟಡ ಅಗತ್ಯವಿದೆ. ಈ ಬಗ್ಗೆ ಶಾಸಕ ಬಾಲಕೃಷ್ಣ ಒತ್ತಡ ಹೇರಿರುವುದರಿಂದ ಈ ಸಲದ ಬಜೆಟ್‌ನಲ್ಲಿ ಸೇರಿಸಲಾಗಿದೆ. ಶೀಘ್ರವೇ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಜಿಲ್ಲಾಮಟ್ಟದ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯವನ್ನೂ ತಾಲೂಕು ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದರು.

ಕುದೂರು ಸರ್ಕಾರಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗುವುದು. ಆರೋಗ್ಯ ಬಂಧು ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವೇತನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರೊ. ಶಾರದಾ ರಾಜಣ್ಣ ಅವರು ಅಮೆರಿಕಕ್ಕೆ ಹೋಗಿ ನಂತರ ಗ್ರಾಮಕ್ಕೆ ಬಂದು ಆಸ್ಪತ್ರೆ, ಶಾಲೆ, ಪಶು ಆಸ್ಪತ್ರೆ, ಲೈಬ್ರರಿ ನಿರ್ಮಿಸಿರುವುದು ಸಮಾಜಕ್ಕೆ ಸ್ಫೂರ್ತಿದಾಯಕ ಕೆಲಸವಾಗಿದೆ. ಶಾರದಾ ಅವರ ಕನಸನ್ನು ನನಸು ಮಾಡಲು ಅವರ ಪತಿ ಅವಕಾಶ ನೀಡಿರುವುದರಿಂದ ಇಂತಹ ಸಾಮಾಜಿಕ ಕಳಕಳಿ ಪೂರೈಸಲು ಸಾಧ್ಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಂತಹ ಅವಕಾಶ ಸಿಗುವ ರೀತಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ದಿ.ಪ್ರೊ.ಶಾರದಾ ರಾಜಣ್ಣ ಅವರ ತ್ಯಾಗಕ್ಕೆ ಕರುಣಾಳು ಎಂಬ ಕೃತಿ ಪ್ರಕಟಿಸಿ ಕೃತಿಗೆ ಉತ್ತಮ ಹೆಸರು ಇಟ್ಟಿದ್ದಾರೆ. ಅವರ ತುಡಿತ ಎಲ್ಲರಿಗೂ ಮಾದರಿಯಾಗಬೇಕು. ಹೊರ ದೇಶಕ್ಕೆ ಹೋಗಿ ಅಲ್ಲಿನ ಗುಣಮಟ್ಟದ ಆಸ್ಪತ್ರೆ, ಶಾಲೆ ಇಲ್ಲಿ ಆರಂಭಿಸಬೇಕೆಂದು ಚಿಂತಿಸಿ ಟ್ರಸ್ಟ್ ಆರಂಭಿಸಿ ಶಾಲೆ, ಆಸ್ಪತ್ರೆ, ಪಶು ಆಸ್ಪತ್ರೆ, ನಿರ್ಮಿಸಿರುವುದು ಸಾಮಾನ್ಯ ಅಲ್ಲ. ಇವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದರು.

ಈ ನಿಟ್ಟಿನಲ್ಲಿ ಸುಗ್ಗನಹಳ್ಳಿ ಗ್ರಾಮದ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಿ ಅವರ ಪ್ರತಿಮೆ ನಿರ್ಮಿಸಲಾಗುವುದು. ಶಾಲೆಯಲ್ಲಿ ಕೆಪಿಎಸ್ ಆರಂಭಿಸಿ ಅದಕ್ಕೂ ಅವರ ಹೆಸರು ನಾಮಕರಣ ಮಾಡಲಾಗುವುದು. ಅವರ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು.

ಶಾಲೆಗೆ 4 ಕೋಟಿ ರೂ. ಅನುದಾನ ನೀಡುವಂತೆ ಸಚಿವರಲ್ಲಿ ಬಾಲಕೃಷ್ಣ ಮನವಿ ಮಾಡಿದರು. ಕೆಆರ್‌ಎಸ್ ಟ್ರಸ್ಟ್ ಅಧ್ಯಕ್ಷ ಡಾ.ಬೆಟ್ಟಯ್ಯ ರಾಜಣ್ಣ, ಸಾಹಿತಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿದರು.

ಪತ್ರಕರ್ತ, ಟ್ರಸ್ಟ್‌ನ ಖಜಾಂಚಿ, ಯುಎಸ್‌ಐ ಆರ್ಥಿಕ ಸಲಹೆಗಾರರಾದ ಕವಿತಾ ರಾಜಣ್ಣ, ತ್ಯಾಗರಾಜು, ಡಿಎಚ್‌ಒ ನಿರಂಜನ್, ಗ್ರಾಪಂ ಅಧ್ಯಕ್ಷೆ ಮಮತಾ ಕಿರಣ್, ಮಾಜಿ ಅಧ್ಯಕ್ಷ ಜಗದೀಶ್, ತಹಸೀಲ್ದಾರ್ ಶರತ್ ಕುಮಾರ್, ಬಿಇಒ ಚಂದ್ರಶೇಖರ್, ಕಣ್ಣೂರು ಜಗದೀಶ್, ಡಿಡಿಪಿಐ ಬಸವರಾಜೇಗೌಡ, ಮುಖಂಡರಾದ ಮಂಜೇಶ್, ಶಶಾಂಕ್ ರೇವಣ್ಣ, ಗೋರಾ ಶ್ರೀನಿವಾಸ್, ಕೆ.ಎಚ್.ರವಿ, ಕಣ್ಣೂರು ಚಂದ್ರಣ್ಣ, ಪ್ರಭುದೇವರು ಇತರರು ಇದ್ದರು.

ಕಾಂಗ್ರೆಸ್‌ನಿಂದ ಜನಪರ ಕೆಲಸ

ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ಮಾರ್ಕೆಟ್, ಆಸ್ಪತ್ರೆ, ತಾಲೂಕು ಕಚೇರಿ ಕಟ್ಟಡವನ್ನು ಗುಂಡೂರಾವ್ ನೀಡಿದರು. ಈಗ 40 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಅವರ ಮಗ ದಿನೇಶ್ ಗುಂಡೂರಾವ್ ನಿರ್ಮಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.ದೇವರಾಜ ಅರಸು ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಜನಪರ ಕೆಲಸ ಮಾಡುತ್ತಿದೆ. ಬಿಜೆಪಿಯವರು ಭಾವನಾತ್ಮಕವಾಗಿ ಕೆಲಸಮಾಡಿದರೆ, ನಾವು ಭರವಸೆಯಿಂದ ಕೆಲಸ ಮಾಡುತ್ತಿದ್ದೇವೆ. ಯಡಿಯೂರಪ್ಪ ರೈತರ ನಾಯಕ ಎಂದು ಗೋಲಿಬಾರ್ ಮಾಡಿಸಿದರು. ಜೆಡಿಎಸ್, ಬಿಜೆಪಿ ಜಾತಿಜಾತಿಗಳ ನಡುವೆ ಕಂದಕ ನಿರ್ಮಿಸಿವೆ. ಸಿಎಂ. ಸಿದ್ದರಾಮಯ್ಯ ಗ್ಯಾರಂಟಿಗಳನ್ನು ನೀಡುವ ಮೂಲಕ ಭಾಗ್ಯದಾತರಾಗಿದ್ದಾರೆ. ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದರು. ಅದನ್ನು ನೀಡಲಿಲ್ಲ. ಆದರೆ ನಾವು ಯುವ ನಿಧಿ ಸೇರಿ 5ಗ್ಯಾರಂಟಿ ನೀಡುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net