ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಾಲಕರು ಹೃದಯಘಾತದ (ಹೃದಯರಕ್ತನಾಳ)ಕಾಯಿಲೆಗಳ ಅಪಾಯದಲ್ಲಿದ್ದು, ಅವರಲ್ಲಿ ಶೇ.೪೦-೫೦ ಜನರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ಜಯದೇವ ಆಸ್ಪತ್ರೆ ನಡೆಸಿದ ಆರೋಗ್ಯ ತಪಾಸಣೆಯಿಂದ ಬೆಳಕಿಗೆ ಬಂದಿದೆ.
ಜಯದೇವ ಆಸ್ಪತ್ರೆಯು ೮,೨೦೦ ಬಿಎಂಟಿಸಿ ಚಾಲಕರನ್ನು ಕಳೆದ ೧೩ ತಿಂಗಳಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಿದೆ. ಹೃದಯ ಸಂಬಂಧಿ ಸಮಸ್ಯೆಗಳಿಗಾಗಿ ಚಾಲಕರನ್ನು ಪರೀಕ್ಷಿಸಲು ಆಸ್ಪತ್ರೆಯು ೨೦೨೨ ರ ಆಗಸ್ಟ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ಎಲ್ಲ ಚಾಲಕರ ರಕ್ತ ಪರೀಕ್ಷೆಗಳು, ಹೃದಯದ ಒತ್ತಡ (ಟ್ರೆಡ್‌ಮಿಲ್) ಪರೀಕ್ಷೆಗಳು, ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್‌ಗಳೊಂದಿಗೆ (ಇಕೋ) ಸಮಗ್ರ ಆರೋಗ್ಯ ತಪಾಸಣೆಗೆ ನಡೆಸಲಾಯಿತು.
೪೫ ರಿಂದ ೬೦ ವಯಸ್ಸಿನ ೮,೨೦೦ ಚಾಲಕರು ಮತ್ತು ನಿರ್ವಾಹಕರನ್ನು ಪರೀಕ್ಷಿಸಿ ಬಳಿಕ ಸಂಶೋಧನೆಗಳನ್ನು ಮಾಡಲಾಯಿತು. ಅವರಲ್ಲಿ ಶೇ.೪೦ ಮಧುಮೇಹಿಗಳು, ಶೇ.೪೦ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು. ಶೇ.೬೨ ಬೊಜ್ಜುದೇಹ (ಓಬೆಸಿಟಿ) ಬಳಲುತ್ತಿರುವುದು. ಶೇ.೩೦ ಹೈ ಕೊಲೆಸ್ಟ್ರಾಲ್ ಮತ್ತು ಶೇ.೨೫ ಧೂಮಪಾನಿಗಳು ಎಂಬುದು ಕಂಡುಬಂದಿದೆ. ಅಲ್ಲದೇ ಶೇ.೫ ಮಂದಿಗೆ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡು ಬಂದಿದೆ. ಹೀಗಾಗಿ ಇವರಿಗೆ ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಲಿದ್ದಾರೆ ಎಂದು ಶ್ರೀಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಎಸ್‌ಆರ್) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಅನಿಯಮಿತ ಕೆಲಸದ ಸಮಯ, ಅಸಮರ್ಪಕ ಆಹಾರ ಸೇವನೆ, ನಿದ್ರೆ ಕೊರತೆ, ವ್ಯಾಯಾಮ ಮಾಡದೆ ಇರುವುದು ಮತ್ತು ದೂರದ ಪ್ರಯಾಣದ ಸಮಯದಲ್ಲಿ ನಿರಂತರ ಕುಳಿತುಕೊಳ್ಳುವುದರಿಂದ ಆಯಾಸದಿಂದ ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಾರೆ ಎಂದು ಮಂಜುನಾಥ್ ವಿವರಿಸಿದ್ದಾರೆ.
ಇದೇ ರೀತಿಯ ಸಮಗ್ರ ಆರೋಗ್ಯ ತಪಾಸಣೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಪೊಲೀಸ್ ಸಿಬ್ಬಂದಿಗೂ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ ಏಕೆಂದರೆ ಅವರು ಹೃದಯ ಸಂಬಂಧಿ ಸಮಸ್ಯೆಗಳ ಹೆಚ್ಚಿನ ಅಪಾಯದಲ್ಲಿದ್ದಾರೆ.
ಶೇ.೩೦ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಸಾವು:
ಭಾರತದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗಳಿಂದ ಶೇ.೩೦ ಸಾವುಗಳು ಸಂಭವಿಸುತ್ತಿದ್ದು, ಆದರಿಂದ ಆರಂಭಿಕ ಹಂತದಲ್ಲಿ ಜನರನ್ನು ಪರೀಕ್ಷಿಸುವುದು ಬಹಳ ಮುಖ್ಯ. ಇದು ಮರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಒತ್ತಡದ ಕೆಲಸವನ್ನು ಹೊಂದಿರುವುದರಿಂದ ಮತ್ತು ಪ್ರತಿದಿನವೂ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅವರನ್ನು ಪರೀಕ್ಷಿಸುವುದು ಮುಖ್ಯವಾಗಿದೆ. ವಾಯು ಮಾಲಿನ್ಯವು ಕೇವಲ ಉಸಿರಾಟದ ಸಮಸ್ಯೆಗಳಿಗೆ ಮಾತ್ರ ಕಾರಣವಲ್ಲ, ಆದರೆ ೨.೫ ಮಿಲಿಗ್ರಾಂಗಿಂತ ಕಡಿಮೆ ಇರುವ ಕಣಗಳ ಇನ್ಹಲೇಷನ್ ಸುಲಭವಾಗಿ ಶ್ವಾಸಕೋಶದ ಮೂಲಕ ಹಾದುಹೋಗುತ್ತದೆ ಮತ್ತು ಅಪಧಮನಿಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ.
ಕೋಟ್…
ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ತುಂಬಾ ಒಳ್ಳೆಯದು. ಏಕೆಂದರೆ ಇವತ್ತು ನಮ್ಮ ದೇಶದಲ್ಲಿ ಜೀವನಶೈಲಿ ಕಾಯಿಲೆಯಿಂದ ಶೇ.೬೦ ರಷ್ಟು ಸಾವು ಸಂಭವಿಸುತ್ತಿದೆ. ಅದರಲ್ಲಿಯೂ ಹೃದಾಯಘಾತದಿಂದ ಶೇ.೩೦ ಸಾವುಗಳ ಆಗುತ್ತಿವೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ೪೦ ವರ್ಷ ದಾಟಿದ ನಂತರ ತಪಾಸಣೆ ನಡೆಸಿ ಏನಾದರೂ ಸಮಸ್ಯೆಯಿದ್ದರೆ ಚಿಕಿತ್ಸೆ ಪಡೆದು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.
ಡಾ.ಸಿ.ಎನ್.ಮಂಜುನಾಥ್, ಜಯದೇವ ಹೃದಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ