

ತುಮಕೂರು : ಅತ್ಯಾಧುನಿಕ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ಬರೋಬ್ಬರಿ ನಾಲ್ಕು ವರ್ಷದ ನಂತರ ಉದ್ಘಾಟನೆ ಭಾಗ್ಯ ಕಂಡಿದ್ದು, ಪ್ರಾಣಿಗಳಿಗೆ ಚಿಕಿತ್ಸೆ ಲಭ್ಯವಾಗಲಿದೆ. ನಗರದ ಶಿರಾಗೇಟ್ ಬಳಿಯ ಅರಳಿಮರದ ಪಾಳ್ಯದಲ್ಲಿ 2017ರ ಜುಲೈ 19ರಂದು ಹೈಟೆಕ್ ಪಶು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು, 2.78 ಕೋಟಿ ರೂ., ವೆಚ್ಚದ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆ ನಿರ್ಮಾಣ ಕಾಮಗಾರಿ 2018ರ ಜೂನ್ 16ಕ್ಕೆ ಮುಕ್ತಾಯಗೊಂಡಿತ್ತು.
150 ಬೈ 150 ಚ.ಅಡಿ ವಿಸ್ತೀರ್ಣ ಜಾಗದಲ್ಲಿ ಆಸ್ಪತ್ರೆ ನಿರ್ಮಾಣಗೊಂಡು ಮೂರುವರೆ ವರ್ಷವಾದ ನಂತರ ಪಶು ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ ದೊರೆಕಿದ್ದು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.
ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಿಸಿ ವರ್ಷಗಳೇ ಕಳೆದಿದ್ದು ಆಸ್ಪತ್ರೆಗೆ ಬೇಕಾದ ಅಗತ್ಯ ಸಿಬ್ಬಂದಿ, ತಜ್ಞ ವೈದ್ಯರನ್ನು ನೇಮಿಸಿ, ಪ್ರಾಣಿಗಳಿಗೆ ವಿಶೇಷ ವೈದ್ಯಕೀಯ ಸೇವೆ ಒದಗಿಸಲು ಪಶುಇಲಾಖೆ ಮುಂದಾಗಬೇಕು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ರಾಜ್ಯ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್, ಡಾ.ವಿಶ್ವನಾಥ್, ಡಾ.ಮಹಾಲಿಂಗೇಶ್ವರ್ ಇದ್ದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ : ರಾಜ್ಯದ 4 ವಿಭಾಗಗಳಲ್ಲಿ ಹೈಟೆಕ್ ಪಶು ಆಸ್ಪತ್ರೆ ಸ್ಥಾಪನೆಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ನಿರ್ಧಾರ ಕೈಗೊಂಡು ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಕಲಬುರಗಿ ವಿಭಾಗಗಳಲ್ಲಿ ಪ್ರಾಣಿಗಳಿಗಾಗಿಯೇ ಅತ್ಯಾಧುನಿಕ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದು ಬೆಂಗಳೂರು ವಿಭಾಗದ ಆಸ್ಪತ್ರೆಯು ತುಮಕೂರಿಗೆ ಮಂಜೂರಾಗಿತ್ತು. ಈ ಅತ್ಯಾಧುನಿಕ ಆಸ್ಪತ್ರೆಯಲ್ಲಿ ಸಾಕುಪ್ರಾಣಿಗಳು ಸೇರಿ ಎಲ್ಲ ಪ್ರಾಣಿಗಳಿಗೆ ವಿಶೇಷ ಚಿಕಿತ್ಸೆ ಜತೆಗೆ ಶಸ್ತ್ರಚಿಕಿತ್ಸೆ ವಿಭಾಗ, ಪ್ರಸೂತಿ ವಿಭಾಗ, ರೆಡಿಯಾಲಜಿ ವಿಭಾಗ ಸೇರಿ ಪ್ರಾಣಿಗಳಿಗೆ ತಗಲುವ ಹೊಸ , ಹೊಸ ರೋಗಗಳಿಗೆ ಕಾರಣವಾಗುವ ವೈರಾಣುಗಳ ಪತ್ತೆ ಹಚ್ಚುವ ಆಧುನಿಕ ಪ್ರಯೋಗಾಲಯ ಸಹ ಇರಲಿದೆ. ಹೌಸಿಂಗ್ ಬೋರ್ಡ್ ವತಿಯಿಂದ ಕಟ್ಟಡ ನಿರ್ಮಿಸಿದ್ದು 2018ರ ಆಗಸ್ಟ್‌ನಲ್ಲೇ ಪಶುಪಾಲನ ಇಲಾಖೆಗೆ ಹಸ್ತಾಂತರಿಸಲಾಗಿದೆ.
39 ಹುದ್ದೆಗೆ ಪ್ರಸ್ತಾವನೆ ಸಲ್ಲಿಕೆ : ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಗೆ ತಜ್ಞ ವೈದ್ಯರ, ಸಿಬ್ಬಂದಿ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಉಪನಿರ್ದೇಶಕ ಸೇರಿ 39 ಹುದ್ದೆಗಳನ್ನು ನೇಮಿಸುವಂತೆ ಪಶುಪಾಲನಾ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವೆಟರನರಿ ಸರ್ಜನ್-1, ಫಿಜಿಶಿಯನ್-1, ಪ್ರಸೂತಿತಜ್ಞ-1, ಪ್ಯಾಥಲಜಿಸ್ಟ್-1, ಪಶುವೈದ್ಯಾಧಿಕಾರಿ-2, ಪಶುವೈದ್ಯಕೀಯ ಶ್ರೂಶಕರುಗ್ರೇಡ್1-5, ಗ್ರೇಡ್2-5, ಲ್ಯಾಬ್ ಟೆಕ್ನಿಷಿಯನ್-1, ಎಕ್ಸ್‌ರೇ-1, ಪ್ರಯೋಗಾಲಯ ಸಹಾಯಕ-1, ಕಚೇರಿ ಅಧೀಕ್ಷಕ-1, ವಾಹನಚಾಲಕರು-2 ಸೇರಿ ವಿವಿಧ ಹುದ್ದೆಗಳಿಗೆ 39 ಜನರನ್ನು ನೇಮಿಸಬೇಕಿದೆ.
ಮನುಷ್ಯರ ರೀತಿ ಪಶುಗಳಿಗೂ ಬರುವ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳು ಹೈಟೆಕ್ ಆಸ್ಪತ್ರೆಯಲ್ಲಿವೆ. ಹೈನುಗಾರಿಕೆಯಲ್ಲಿ ತೊಡಗಿರುವವರು ಮತ್ತು ಸಾಕುಪ್ರಾಣಿಗಳ ಮಾಲೀಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಆಸ್ಪತ್ರೆ ನಿರ್ಮಾಣವಾಗಿ ವರ್ಷಗಳೇ ಕಳೆದಿದ್ದರೂ ಹಿಂದಿನ ಸರ್ಕಾರ ಮೂಲಸೌಕರ್ಯ ಒದಗಿಸಿರಲಿಲ್ಲ, ಈಗ ಕೊರತೆ ನಿವಾರಿಸಿ ಉದ್ಘಾಟಿಸಲಾಗಿದೆ. ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ