

ಎನ್.ಆರ್.ಪುರ: ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ 1996ರಿಂದ 99ರವರೆಗೂ ಭ್ರಷ್ಟಾಚಾರವಿಲ್ಲದೆ ಲಕ್ಷಾಂತರ ಶಿಕ್ಷಕರನ್ನು ನೇರ ನೇಮಕಾತಿ ಮಾಡಿದ್ದರು ಎಂದು ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಪ್ರತಿಭಾ ಪುರಸ್ಕಾರ ಸಮಿತಿ ಸದಸ್ಯ ರಾಜಶೇಖರ್ ತಿಳಿಸಿದರು.
ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಸಚಿವ ಗೋವಿಂದೇಗೌಡರ ಬಾಲಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ, ಶಾರದಾ ಪೂಜೆ, 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಗೋವಿಂದೇಗೌಡರಿಗೆ ರಾಜ್ಯ ಸರ್ಕಾರ ದೇವರಾಜು ಅರಸು ಪ್ರಶಸ್ತಿ ಹಾಗೂ 1 ಲಕ್ಷ ರೂಪಾಯಿ ನೀಡಿತ್ತು. ಆಗ ಗೋವಿಂದೇಗೌಡರು ಅವರು ಓದಿದ ಕಾನೂರು ಸರ್ಕಾರಿ ಶಾಲೆಗೆ 1 ಲಕ್ಷ ರೂಪಾಯಿ ನೀಡಿದ್ದು, ಆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಪ್ರತಿ ವರ್ಷ ಅತಿ ಹೆಚ್ಚು ಅಂಕ ಪಡೆದ 7ನೇ ತರಗತಿಯ 4 ಮಕ್ಕಳಿಗೆ ಬಡ್ಡಿ ಹಣದಲ್ಲಿ ಬಾಲಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ಸಿಆರ್‌ಪಿ ಓಂಕಾರಪ್ಪ ಮಾತನಾಡಿ, ಶಿಕ್ಷಕರು ಪಾಠ ಮಾತ್ರ ಮಾಡುತ್ತಾರೆ. ಆದರೆ ಶಾಲೆಯ ಸಂಪೂರ್ಣ ಪ್ರಗತಿಗೋಸ್ಕರ ಸಮುದಾಯದವರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪಾಲಕರು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಖಜಾಂಚಿ ಮಂಗಳಗೌರಮ್ಮ ಮಾತನಾಡಿ, ಕಾನೂರು ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಶಾಲೆಯ ಮಕ್ಕಳು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪ್ರಗತಿ ಸಾಧಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿ ಮಂಜುಳಾ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕಿಯರ ಸಂಬಂಧ ತಾಯಿ ಮತ್ತು ಮಕ್ಕಳ ಸಂಬಂಧದಂತೆ ವಾತ್ಸಲ್ಯಪೂರ್ಣವಾಗಿರುತ್ತದೆ. ಶಿಕ್ಷಕರು ಸಹ ಮಕ್ಕಳಂತೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರು.
2023-24ನೇ ಸಾಲಿನಲ್ಲಿ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 4 ವಿದ್ಯಾರ್ಥಿಗಳಿಗೆ ಬಾಲಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎನ್.ಚಂದ್ರಶೇಖರ್, ಉಪಾಧ್ಯಕ್ಷೆ ಸುನೀತಾ, ಸದಸ್ಯೆ ಶುಭಲತಾ, ಕಾನೂರು ಗ್ರಾಪಂ ಅಧ್ಯಕ್ಷ ರತ್ನಾಕರ್, ಸದಸ್ಯರಾದ ವಿಜಯಕುಮಾರ್, ವಿಶಾಂತಿ ಡಿಸೋಜ, ಭಡ್ತಿ ಮುಖ್ಯಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಹಿಣಚಿ ಅಶೋಕ ಗೌಡ, ಶಿವರಾಜ್‌ಕುಮಾರ್, ಸುಮಿತ್ರಾ, ಕೆ.ಎಂ.ಪ್ರದೀಪ್ ಇತರರಿದ್ದರು.