

ಮಾಗಡಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4 ತಿಂಗಳ ಒಳಗೆ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಗುರುವಾರ ನಡೆದ ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿಎಸ್ವೈ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲಾಯಿತು. ಈಗ 23 ಎಕರೆ ವಿಸ್ತೀರ್ಣದಲ್ಲಿ ವಿಮಾನ ನಿಲ್ದಾಣದ ಮಧ್ಯೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಲಾಗುತ್ತಿದೆ. ವಿಶ್ವದ ಯಾವುದೇ ವಿಮಾನ ನಿಲ್ದಾಣದಲ್ಲಿ ಇಂತಹ ಪ್ರತಿಮೆ ಇಲ್ಲ. ವಿಮಾನ ನಿಲ್ದಾಣಕ್ಕೆ ಬರುವವರು ನಾಡಪ್ರಭುವಿನ ದರ್ಶನ ಮಾಡಬೇಕು. ಅಂತಹ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದರು.
ವಿಶ್ವದ ಗಮನ ಸೆಳೆಯುವಂತೆ ಅಭಿವೃದ್ಧಿ: ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ದಿಗೊಳಿಸಿ ವಿಶ್ವದ ಗಮನ ಸೆಳೆಯುವಂತೆ ಮಾಡಲಾಗಿದೆ, ಜಿಲ್ಲೆಯ 2,500 ಕೆರೆಗಳಲ್ಲಿ 1500 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಹಾಗೂ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಲಾಗುವುದು. ನರೇಗಾ ಯೋಜನೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಲಜೀವನ್ ಮಿಷನ್ ಅಡಿ 800 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ 60 ಸಾವಿರ ಸೇರಿ ಜಿಲ್ಲೆಯ 2 ಲಕ್ಷ ಮನೆಗಳಿಗೆ ಕಾವೇರಿ ನದಿ ಮೂಲದಿಂದ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕೆಲಸ ಮಾಡಲು ಪಣ ತೊಡಲಾಗಿದೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ಅಭಿವೃದ್ಧಿಗೊಂಡಂತೆ ದೇಶದ ಮತ್ತಾವುದೇ ನಗರಗಳು ಅಭಿವೃದ್ಧಿ ಕಂಡಿಲ್ಲ. ದೇಶದಲ್ಲಿ ನಂ.1 ನಗರವಾಗಿ ಬೆಂಗಳೂರು ಬೆಳೆದು ವಿಶ್ವಮಾನ್ಯತೆ ಪಡೆದಿದೆ. ಇಂದು ವಿನ್ಯಾಸದ ಬಗ್ಗೆ ಮಾತನಾಡುತ್ತಿದ್ದೇವೆ, 500 ವರ್ಷದ ಹಿಂದೆಯೇ ಬೆಂಗಳೂರು ನಿರ್ಮಿಸಿ ವಿವಿಧ ಸಮುದಾಯದವರಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ, ನಗರದ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ದು ಕೆಂಪೇಗೌಡರ ದೊಡ್ಡ ಸಾಧನೆ. ಅವರನ್ನು ಪ್ರತಿಕ್ಷಣ ಸ್ಮರಿಸಬೇಕು ಎಂದು ಉಸ್ತುವಾರಿ ಸಚಿವರು ಹೇಳಿದರು.
ಕಾರ್ಯಕ್ರಮದ ಆಯೋಜಕ ಎಚ್.ಎಂ. ಕೃಷ್ಣಮೂರ್ತಿ 22 ವರ್ಷಗಳಿಂದ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಕೆಂಪೇಗೌಡರಲ್ಲಿ ದೇವರನ್ನು ಕಾಣುತ್ತಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ಪ್ರಶಂಸೆ ವ್ಯಕ್ತಪಡಿಸಿದರು.
ಸರ್ವ ಜನಾಂಗದವರಿಗೆ ಸೌಲಭ್ಯ: ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರು ತ್ಯಾಗ, ಬಲಿದಾನದಿಂದ ನಾಡಿಗೆ ಕೀರ್ತಿ, ಸೇವೆ ನೀಡಿದ್ದಾರೆ. ವಿಶ್ವದ ದೊಡ್ಡಣ್ಣನಂತೆ ಕೆಂಪೇಗೌಡರು ಬೆಂಗಳೂರು ನಿರ್ಮಿಸಿ ಸರ್ವ ಜಾತಿ, ಜನಾಂಗ, ಧಮೀರ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ. ವಿಜಯನಗರ ಅರಸರ ಕಾಲದಲ್ಲಿ ಅದಕ್ಕೂ ಪೂರ್ವದಲ್ಲಿ ಕಪ್ಪಕಾಣಿಕೆ ನೀಡಿ ನಡೆದುಕೊಳ್ಳುವ ವೇಳೆ ಕೆಂಪೇಗೌಡರು ಬೆಂಗಳೂರು ಕಟ್ಟಿ ವಿಜಯನಗರ ಕೃಷ್ಣದೇವರಾಯರಿಗೆ ನಮ್ಮ ನಾಡನ್ನು ಕಟ್ಟುತ್ತೇವೆಂದು ಅನುಮತಿ ಪಡೆದು ಈ ಭಾಗದಲ್ಲಿ ರಾಜರಾಗಿದ್ದರು.
ರಾಜ್ಯದ 60ರಷ್ಟು ರೆವಿನ್ಯೂ ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನಲ್ಲಿ ಉತ್ಪತ್ತಿಯಾಗುತ್ತದೆ. ಆಧುನಿಕ ನಗರಗಳಿಗೆ ಸೆಡ್ಡು ಹೊಡೆಯುವ ರೀತಿ ಬೆಂಗಳೂರನ್ನು ನಿಮಾರ್ಣ ಮಾಡಿದ್ದಾರೆ. ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕು ಎಂದರು.
ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ಕೆಂಪೇಗೌಡರ ಗತವೈಭವ ಮರು ನಿರ್ಮಿಸುವ ಉದ್ದೇಶದಿಂದ ಕಳೆದ 22 ವರ್ಷಗಳಿಂದ ನಿರಂತರವಾಗಿ ಕೆಂಪೇಗೌಡರ ಜಯಂತಿಯನ್ನು ಮಾಗಡಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಅವರು ನಿರ್ಮಿಸಿರುವ ಕೋಟೆ, ಕೆರೆ, ಕಟ್ಟೆ, ಕಂದಕ, ದೇವಾಲಯಗಳ ಉಳಿವಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.
ಚಕ್ರಭಾವಿ ಮಠದ ಸಿದ್ದಲಿಂಗ ಸ್ವಾಮೀಜಿ, ಗುಮ್ಮಸಂದ್ರ ಡಾ. ಚಂದ್ರಶೇಖರ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಕುಮಾರ ಚಂದ್ರಶೇಖರ ಸ್ವಾಮೀಜಿ, ಆನಂದ ಗುರೂಜಿ, ಕಳ್ಳಿಪಾಳ್ಯ ರಂಗನಾಥನಂದ ಸ್ವಾಮೀಜಿ, ನಟರಾದ ಅಭಿಷೇಕ್, ಧನ್ವೀರ್, ನಿಮಾರ್ಪಕ ಉಮಾಪತಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಕೆ.ಆರ್.ಪ್ರಸಾದ್ ಗೌಡ, ಎ.ಎಚ್.ಬಸವರಾಜು ಇತರರು ಇದ್ದರು.
ಮೂವರಿಗೆ ಪ್ರಶಸ್ತಿ, ನಗದು ಬಹುಮಾನ: ವಿಶ್ವದಲ್ಲಿ ಹೆಸರು, ಸಾಧನೆ ಮಾಡಿದ ಮೂವರನ್ನು ಗುರುತಿಸಿ, ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ಹಾಗೂ 5 ಲಕ್ಷ ರೂ. ಬಹುಮಾನ ನೀಡಲಾಗುವುದು. ಜೂ. 27ರಂದು ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಹೆಳಿದರು.
ರೈತರಿಗೆ ಹಣ ಪೂಜಿಸುವುದು ಗೊತ್ತಿಲ್ಲ: ಬೆಂಗಳೂರು ಇಂದು 1.50 ಕೋಟಿ ಜನಸಂಖ್ಯೆ ಹೊಂದಿದ್ದು, ಮುಂದಿನ 30 ವರ್ಷಗಳಲ್ಲಿ 2 ಕೋಟಿಯಷ್ಟಾಗಲಿದೆ. ಇದರಿಂದ ಬೆಂಗಳೂರಿನ ಸುತ್ತಮುತ್ತಲಿನ ಕೆಂಪೇಗೌಡರ ವಂಶಸ್ಥರ ಜಮೀನು ನಗರೀಕರಣವಾಗಲಿದೆ. ಆದ್ದರಿಂದ ರೈತರು ಜಮೀನನ್ನು ಕಳೆದುಕೊಳ್ಳಬೇಡಿ. ಜಮೀನು ಮಾರಾಟದಿಂದ ಬಂದ ಹಣವನ್ನು ನಿಭಾಯಿಸುವ ಶಕ್ತಿ ರೈತರಿಗೆ ಗೊತ್ತಿಲ್ಲ. ರೈತರಿಗೆ ಭೂಮಿ ಪೂಜೆ ಮಾಡುವುದು ಗೊತ್ತು, ಹಣವನ್ನು ಪೂಜಿಸುವುದು ಗೊತ್ತಿಲ್ಲ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಸಸ್ಯಾಹಾರಿ, ಮಾಂಸಾಹಾರಿ ಭೋಜನ: ಜಯಂತಿಯಲ್ಲಿ ಪಾಲ್ಗೊಂಡಿದ್ದ 5 ಸಾವಿರಕ್ಕೂ ಹೆಚ್ಚು ಮಂದಿಗೆ ಸಸ್ಯಾಹಾರಿ ಮತ್ತು ಮಾಂಸಹಾರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಾಗಡಿಯ ಕೆಂಪೇಗೌಡ ಪ್ರತಿಮೆಯಿಂದ ಬೆಳ್ಳಿ ರಥದಲ್ಲಿ ಕೂರಿಸಿ ಪ್ರಮುಖ ಬೀದಿಗಳಲ್ಲಿ ನೂರಾರು ರಾಸುಗಳು, ವಿವಿಧ ಸಾಂಸತಿಕ ಕಲಾ ತಂಡಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ದುರ್ಗಗಳ ಅಭಿವೃದ್ಧಿ: ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮದ ಅಭಿವೃದ್ಧಿಗೆ ಭೂಸ್ವಾಧಿನ ನಡೆಯುತ್ತಿದೆ. 29 ಎಕರೆ ಕೆರೆ ಅಭಿವೃದ್ದಿ, 11 ಎಕರೆ ಜಮೀನಿನಲ್ಲಿ ಕೆಂಪೇಗೌಡರ ಸಮಾಧಿ ಅಭಿವೃದ್ಧಿ ಮಾಡಲಾಗುವುದು. 5 ಎಕರೆ ಜಮೀನಿನಲ್ಲಿ ಮನೆಗಳನ್ನು ಕಟ್ಟಲು ಅವಕಾಶ, ಕೆಂಪೇಗೌಡರ ಕೋಟೆಯನ್ನು ಜೀಣೋರ್ದ್ಧಾರ ಮಾಡಿ ಮರು ನಿಮಾರ್ಣ ಮಾಡಲಾಗುವುದು. ಹಾಗೆಯೇ ಕೆಂಪೇಗೌಡರು ನಿರ್ಮಿಸಿರುವ ಸಾವನದುರ್ಗ, ಬೈರವನದುರ್ಗ, ಹುತ್ರಿದುರ್ಗ ಸೇರಿ ಸುತ್ತಮುತ್ತಲ ದುರ್ಗಗಳನ್ನು ಹಂತ, ಹಂತವಾಗಿ ಅಭಿವೃದ್ದಿಗೊಳಿಸಿ ವಿಶ್ವಖ್ಯಾತಿಗೊಳಿಸಲಾಗುವುದು ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಜನಪರ ಯೋಜನೆಗಳು ಜಾರಿಯಾಗಬೇಕು: ಪಟ್ಟನಾಯಕನಹಳ್ಳಿಯ ಸ್ಫಟಿಕಪುರಿ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ಸರ್ಕಾರ ಕೇವಲ ಕೆಂಪೇಗೌಡರ ಜಯಂತಿ ಆಚರಿಸಿದರೆ ಸಾಲದು. ಅವರ ಹೆಸರಿನಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮಾಡಬೇಕಿದೆ. ಕೆಂಪೇಗೌಡರ ಪರಂಪರೆಯನ್ನು ಉಳಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನ ಲ್ಲಿ ಸಣ್ಣ ಮಳೆ ಬಂದರೆ ನೀರು ಹೊರ ಹೋಗಲು ಸಾಧ್ಯವಾಗುತ್ತಿಲ್ಲ, ಮನೆಗಳಿಗೆ ನೀರು ನುಗ್ಗುತ್ತಿದ್ದು, ಒತ್ತುವರಿಯಾಗಿರುವ ಕೆರೆಗಳ ತೆರವು ಮಾಡುವ ಕೆಲಸ ಆಗಬೇಕಿದೆ. ರಾಜಕಾಲುವೆಗಳು ಮುಚ್ಚಿ ಹೋಗಿವೆ. ಲಂಡನ್ನವರು ಬೆಂಗಳೂರಿನ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಆದರೆ, ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರ ಈಗ ಯಾವ ರೀತಿ ಆಗಿದೆ ಎಂಬುದನ್ನು ಸರ್ಕಾರ ಅರಿಯಬೇಕಿದೆ. 50 ವರ್ಷದ ಹಿಂದಿನ ಭವ್ಯತೆ ಬೇಕಾಗಿದ್ದು, ಅಗ್ರಹಾರಗಳು ಮಾಯವಾಗಿವೆ. ಹೆರಿಟೇಜ್ ಸಿಟಿ ಆಗಬೇಕು, ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಪಿಜಿಯಿಂದ ಕಾಲೇಜಿನವರೆಗೂ ಪಠ್ಯಕ್ರಮದಲ್ಲಿ ಕೆಂಪೇಗೌಡರ ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಈ ಬಗ್ಗೆ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ ಎಂದರು. 19 ವರ್ಷಗಳಿಂದ ಮಾಗಡಿಯಲ್ಲಿ ಎಚ್.ಎಂ. ಕೃಷ್ಣಮೂರ್ತಿ ಅವರು ಕೆಂಪೇಗೌಡ ಜಯಂತಿ ಆಚರಿಸಿಕೊಂಡು ಬಂದಿದ್ದು, ಸರ್ಕಾರಕ್ಕೆ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ತಿಳಿಸಿದರು.
ಇತಿಹಾಸ ಗೊತ್ತಿರುವವರು ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯ. ಶೇ.95 ಮಂದಿ ಇತಿಹಾಸ ಓದುತ್ತಾರೆ, ಆದರೆ, ಇತಿಹಾಸ ನಿಮಾರ್ಣ ಮಾಡುವುದಿಲ್ಲ. ಇತಿಹಾಸ ನಿರ್ಮಿಸುವ ವೇಳೆ ನೋವು, ನಲಿವು, ತ್ಯಾಗ, ಬಲಿದಾನ, ಅವಮಾನ ಅನುಭವಿಸಬೇಕಿದೆ. ಅವುಗಳನ್ನು ಮೆಟ್ಟಿ ನಿಂತು ಕೆಂಪೇಗೌಡರು ನಾಡನ್ನು ನಿರ್ಮಿಸಿದ್ದಾರೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ