

ಹಾವೇರಿ: ಕರೊನಾ ಸೋಂಕಿಗೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಜನರು ಬಲಿಯಾಗಿರುವುದು ಒಂದೆಡೆಯಾದರೆ, ಸಮರ್ಪಕ ವೈದ್ಯಕೀಯ ಸೇವೆ ಸಿಗದೆ ಜಿಲ್ಲೆಯಲ್ಲಿ 4 ತಿಂಗಳಲ್ಲಿ 54 ಶಿಶು ಹಾಗೂ 7 ತಾಯಂದಿರು ಮರಣ ಹೊಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 24ರಿಂದ ದೇಶಾದ್ಯಂತ ಲಾಕ್ಡೌನ್ ಜಾರಿಯಾದ ಬಳಿಕ ಕರೊನಾ ಸೋಂಕು ವ್ಯಾಪಿಸಲು ಆರಂಭಿಸಿತು. ಈ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಯಿತು. ಖಾಸಗಿ ಆಸ್ಪತ್ರೆಗಳು ಸೇವೆ ಬಂದ್ ಮಾಡಿದವು. ಇವೆಲ್ಲದರ ಪರಿಣಾಮ ನವಜಾತ ಶಿಶುಗಳು ಹಾಗೂ ತಾಯಂದಿರಿಗೆ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ. ಕರೊನಾ ಸೋಂಕಿಗೆ ಇದುವರೆಗೆ ಜಿಲ್ಲೆಯಲ್ಲಿ 123 ಜನ ಮೃತಪಟ್ಟಿದ್ದರೆ, ಇದೇ ಅವಧಿಯಲ್ಲಿ 54 ಶಿಶು ಹಾಗೂ 7 ತಾಯಂದಿರು ಮೃತಪಟ್ಟಿದ್ದಾರೆ. ಹೆರಿಗೆ ಸಮಯದಲ್ಲಿ ಮುಂಜಾಗ್ರತೆಯ ಕೊರತೆ, ಸಕಾಲಕ್ಕೆ ಚಿಕಿತ್ಸೆ ಔಷಧ ದೊರೆಯದಿರುವುದು ಹಾಗೂ ಇತರ ಕಾರಣಗಳಿಂದ ಶಿಶು ಹಾಗೂ ತಾಯಂದಿರ ಮರಣದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.
ಕಳೆದ ಏಪ್ರಿಲ್ ತಿಂಗಳಿಂದ ಜುಲೈ ಅಂತ್ಯದವರೆಗೆ ಕಟ್ಟುನಿಟ್ಟಿನ ಲಾಕ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ತಾಯಿ, ಶಿಶು ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಏಪ್ರಿಲ್ನಲ್ಲಿ 14 ಶಿಶು ಮೃತಪಟ್ಟಿವೆ. ಮೇ ತಿಂಗಳಲ್ಲಿ 15, ಜೂನ್ 14 ಹಾಗೂ ಜುಲೈನಲ್ಲಿ 11 ಶಿಶುಗಳು ಮೃತಪಟ್ಟಿವೆ. ಒಂದು ದಿನದಿಂದ ಹಿಡಿದು ಒಂದು ತಿಂಗಳ ಅವಧಿಯ ಶಿಶುಗಳೇ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿವೆ.
ಕರೊನಾ ಆರಂಭದ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಮಾತ್ರ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿತ್ತು. ಕರೊನಾ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಸಾರ್ವಜನಿಕರು ಹೋಗಲು ಹಿಂಜರಿಯುತ್ತಿದ್ದರು. ಖಾಸಗಿ ಆಸ್ಪತ್ರೆಗಳ ಬಾಗಿಲು ಬಂದ್ ಆಗಿದ್ದವು. ಗ್ರಾಮೀಣ ಪ್ರದೇಶಗಳಿಂದ ಗರ್ಭಿಣಿಯರನ್ನು ಕರೆತರಲು ವಾಹನ ಸಮಸ್ಯೆಯಿಂದ ವಿಳಂಬವಾಗುತ್ತಿತ್ತು. ಈ ಎಲ್ಲ ಕಾರಣಗಳಿಂದಾಗಿ ನವಜಾತ ಶಿಶು ಹಾಗೂ ಬಾಣಂತಿಯರ ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ತಾಯಿ ಮರಣ ಪ್ರಮಾಣವೂ ಹೆಚ್ಚಿದೆ. ಏಪ್ರಿಲ್ನಿಂದ ಜುಲೈವರೆಗೆ 7 ತಾಯಂದಿರು ಮೃತಪಟ್ಟಿದ್ದಾರೆ. ಇವರೆಲ್ಲರೂ 20ರಿಂದ 25 ವರ್ಷದೊಳಗಿನವರೇ ಆಗಿರುವುದು ಆತಂಕಕಾರಿಯಾಗಿದೆ. ಹೆರಿಗೆಯಾದ ಕೆಲವೇ ದಿನಗಳಲ್ಲಿ ಈ ತಾಯಂದಿರು ಅಸುನೀಗಿದ್ದಾರೆ. ಏಪ್ರಿಲ್ನಲ್ಲಿ 1, ಮೇ 2, ಜೂನ್ನಲ್ಲಿ 2 ಹಾಗೂ ಜುಲೈ ತಿಂಗಳಲ್ಲಿ 2 ತಾಯಿ ಮರಣ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಕರೊನಾ ಬರುವುದಕ್ಕಿಂತ ಮೊದಲು ಈ ಪ್ರಮಾಣ ಬಹಳ ಕಡಿಮೆಯಿತ್ತು. 2019ರಲ್ಲಿ 14 ಜನ ತಾಯಂದಿರ, 48 ನವಜಾತ ಶಿಶುಗಳ ಮರಣ ವರದಿಯಾಗಿತ್ತು.
ಜುಲೈ ಬಳಿಕ ಕರೊನಾದೊಂದಿಗೆ ಇನ್ನಿತರ ಕಾಯಿಲೆಗಳಿಗೂ ಆರೋಗ್ಯ ಸೇವೆಯನ್ನು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೂ ಸಾರ್ವಜನಿಕರು ಕೋವಿಡ್ ಆಸ್ಪತ್ರೆಗೆ ಹೋಗಲು ಆತಂಕಪಡುತ್ತಿದ್ದಾರೆ. ಕರೊನಾ ಜೊತೆಗೆ ಹೆರಿಗೆ ಸೇರಿ ಎಲ್ಲ ರೀತಿಯ ಆರೋಗ್ಯ ಸೇವೆಗೆ ಸರ್ಕಾರ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಾದರೆ ಕರೊನಾ ನೆಗೆಟಿವ್ ಬಂದಿದ್ದರೂ ಪಿಪಿಇ ಕಿಟ್ ಶುಲ್ಕವನ್ನು ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
4 ತಿಂಗಳ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಿಶು, ತಾಯಿ ಮರಣ ವರದಿಯಾಗಿರುವುದು ಆತಂಕದ ಸಂಗತಿಯಾಗಿದೆ. ಆರಂಭಿಕ ದಿನಗಳಲ್ಲಿ ಕರೊನಾ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗಳಿಗೆ ಬರಲು ಜನರು ಹಿಂದೇಟು ಹಾಕುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯನ್ನು ಯಾವ ಸಮಯದಲ್ಲಿಯೂ ಸ್ಥಗಿತಗೊಳಿಸಿರಲಿಲ್ಲ. ಹೆರಿಗೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಲಾಕ್ಡೌನ್ ಆರಂಭದಿಂದಲೂ ಮಾಡಲಾಗಿತ್ತು. ಜೂನ್ ಬಳಿಕ ಕರೊನಾದೊಂದಿಗೆ ಇನ್ನಿತರ ಆರೋಗ್ಯ ಸೇವೆಯನ್ನು ಎಲ್ಲ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಅರಿವಿನ ಕೊರತೆ ಹಾಗೂ ತಡವಾಗಿ ಆಸ್ಪತ್ರೆಗೆ ಬರುವುದರಿಂದಲೂ ತಾಯಿ, ಶಿಶು ಮರಣದಲ್ಲಿ ಏರಿಕೆಯಾಗಿದೆ. | ಡಾ. ರಾಜೇಂದ್ರ ದೊಡ್ಡಮನಿ, ಡಿಎಚ್ಒ ಹಾವೇರಿ