

ಮೈಸೂರು: ಮೈಸೂರು ನಗರ ಹೊರವಲಯದಲ್ಲಿ ಅಭಿವೃದ್ಧಿ ಪಡಿಸಿದ್ದ 4 ಅನಧಿಕೃತ ಬಡಾವಣೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಶನಿವಾರ ತೆರವುಗೊಳಿಸಲಾಯಿತು.
ಸಾತಗಳ್ಳಿಯ ಸರ್ವೇ ನಂ.65, 27/3, 2/3 ಹಾಗೂ ದೇವನೂರು ಗ್ರಾಮದ ಸರ್ವೇ ನಂ.25ರಲ್ಲಿ ಭೂ ಪರಿವರ್ತನೆಯಾಗದೆ ಮತ್ತು ಪ್ರಾಧಿಕಾರದಿಂದ ಅನುಮೋದಿತ ನಕ್ಷೆ ಪಡೆಯದೆ ಬಡಾವಣೆ ನಿರ್ಮಿಸಲಾಗಿತ್ತು. ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು
ಸಾತಗಳ್ಳಿ ಗ್ರಾಮದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ ಒತ್ತುವರಿಯನ್ನು ಕೂಡ ತೆರವುಗೊಳಸಲಾಯಿತು. ಪ್ರಾಧಿಕಾರದ ಕಾರ್ಯದರ್ಶಿ ಡಾ.ಎನ್.ಸಿ.ವೆಂಕಟರಾಜು ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳಾದ ಮೋಹನ್, ಸುನೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ನಿರ್ದಾಕ್ಷಿಣ್ಯವಾಗಿ ತೆರವು:
ಸಾರ್ವಜನಿಕರು, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ನಿವೇಶನ ಖರೀದಿಸುವ ಮುನ್ನ ಬಡಾವಣೆಯು ಮುಡಾದಿಂದ ಅನುಮೋದನೆ ಆಗಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹಾಗೂ ಅನಧಿಕೃತ ಬಡಾವಣೆಗಳ ಬಗ್ಗೆ ತಿಳಿದಲ್ಲಿ ಪ್ರಾಧಿಕಾರದ ಗಮನಕ್ಕೆ ತರಬೇಕು. ಅಂತಹ ಅನಧಿಕೃತ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ತಿಳಿಸಿದ್ದಾರೆ.