ಸೆರೆ ಸಿಗದ 4 ಹೆಣ್ಣು ಹುಲಿ ಮರಿಗಳು

mysore
Published on

ಮೈಸೂರು: ಮೈಸೂರು ನಗರದ ಸಮೀಪವೇ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಣ್ಣು ಹುಲಿ ಮರಿಗಳು ಅರಣ್ಯ ಇಲಾಖೆಯ ಸಿಬ್ಬಂದಿ ಕೈಗೆ ಸಿಗದೆ ಸತಾಯಿಸುತ್ತಿವೆ.

ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಸೆರೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿರುವ ಇವುಗಳು ಚಳ್ಳೆಹಣ್ಣು ತಿನ್ನಿಸಿವೆ.
ಮೂರು ಮರಿಗಳಲ್ಲಿ ಒಂದು ಮರಿ(ಟಿ-7) ದೊಡ್ಡಕಾನ್ಯದ ಬಳಿ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದರೆ, ಇನ್ನೆರಡು ಬೇರೆ ಗ್ರಾಮಗಳಲ್ಲಿ ಸಂಚಾರ ಮಾಡಿದ ಗುರುತು ಪತ್ತೆಯಾಗಿದೆ.

ನಗರದ ಬಳಿ ಹೆಜ್ಜೆ ಗುರುತು:


ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ಮೈಸೂರು ಜಿಲ್ಲೆಗೆ ಸೇರಿದ ಕಾಡಂಚಿನ ಗ್ರಾಮಗಳ ಪಾಳು ಬಿದ್ದಿರುವ ಖಾಸಗಿ ಭೂಮಿಯಲ್ಲಿ 4 ಮರಿಗಳೊಂದಿಗೆ ಸುರಕ್ಷಿತವಾಗಿ ವಾಸ್ತವ್ಯ ಹೂಡಿದ್ದ ತಾಯಿ ಹುಲಿ, ಇದೀಗ ಮರಿಗಳನ್ನು ಸ್ವತಂತ್ರವಾಗಿ ಬದುಕಲು ತನ್ನ ಸುಪರ್ದಿಯಿಂದ ಹೊರ ದೂಡಿದೆ.

ಅಮ್ಮನ ಆರೈಕೆಯಲ್ಲಿ ಬೆಳೆಯುತ್ತಿದ್ದ ಹುಲಿ ಮರಿಗಳು ತಿಂಗಳ ಹಿಂದಷ್ಟೇ ಪ್ರತ್ಯೇಕ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದು, ಅರಿವಿಲ್ಲದೆ ಮೈಸೂರು ನಗರದ ಬಳಿ ಬಂದಿವೆ. ಈ ಹಿಂದೆಯೇ ಮೈಸೂರು ವಲಯಕ್ಕೆ ಸೇರಿದ ಚಿಕ್ಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 4 ಮರಿಗಳೊಂದಿಗೆ ತಾಯಿ ಹುಲಿ ಸಂಚಾರದ ದೃಶ್ಯ ದನಗಾಹಿಗಳು ಹಾಗೂ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿತ್ತು. ಜತೆಗೆ, ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ನಲ್ಲಿ ಇವುಗಳು ತಾಯಿ ಹುಲಿ ಜತೆ ತಿರುಗಾಡುವ ದೃಶ್ಯ ಸೆರೆಯಾಗಿತ್ತು.

ಸುರಕ್ಷಿತ ಸ್ಥಳ ಅರಸಿ ಚಿಕ್ಕನಹಳ್ಳಿ ಅರಣ್ಯಕ್ಕೆ:


ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯದಲ್ಲಿ ಬದುಕು ಕಟ್ಟಿಕೊಂಡಿದ್ದ ಹೆಣ್ಣು ಹುಲಿ, ಗರ್ಭಿಣಿಯಾದ ಬಳಿಕ ತನ್ನ ಕರುಳ ಕುಡಿಗಳನ್ನು ಬೇರೆ ಹುಲಿಗಳಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳ ಅರಸಿ ಚಿಕ್ಕನಹಳ್ಳಿ ಮೀಸಲು ಅರಣ್ಯಕ್ಕೆ ಬಂದಿರುವ ಅನುಮಾನ ಇದೆ.

ಅಲ್ಲಿಯೇ 4 ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ, ಆ ಭಾಗದಲ್ಲಿರುವ ಕಾಡಂದಿ, ಮೊಲ, ಮೇಯಲು ಬರುತ್ತಿದ್ದ ಜಾನುವಾರುಗಳನ್ನು ಬೇಟೆಯಾಡಿ ಮರಿಗಳನ್ನು ಪಾಲನೆ ಮಾಡಿತ್ತು. ಒಂದೂವರೆ ವರ್ಷದವರೆಗೂ ಮರಿಗಳನ್ನು ಆರೈಕೆ ಮಾಡಿದ ತಾಯಿ ಹುಲಿ, ಇವುಗಳಿಗೆ ಪ್ರಾಣಿಗಳನ್ನು ಬೇಟೆಯಾಡುವ ಕಲೆ ಕಲಿಸಿದೆ. ಈ ವೇಳೆ ಮರಿಯೊಂದನ್ನು ತನ್ನಿಂದ ದೂರ ಮಾಡಿರುವ ತಾಯಿ ಹುಲಿ, ಉಳಿದ ಮೂರು ಹೆಣ್ಣು ಮರಿಗಳನ್ನು ಕೆಲ ದಿನ ಪಾಲನೆ ಮಾಡುತ್ತ ಹಂತ ಹಂತವಾಗಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ಮಾಡಿ ದೂರ ಮಾಡಿದೆ.

ಬಸವಳಿದಿರುವ ಅರಣ್ಯ ಸಿಬ್ಬಂದಿ:
ಕಳೆದ ಒಂದು ತಿಂಗಳಿಂದಲೂ ದೊಡ್ಡಕಾನ್ಯ, ಚಿಕ್ಕಕಾನ್ಯ ಹಾಗೂ ಟಿವಿಎಸ್ ಫ್ಯಾಕ್ಟರಿ ಬಳಿ ಸುತ್ತಾಡುತ್ತಿರುವ ಹೆಣ್ಣು ಹುಲಿ ಮರಿ ಸೂಕ್ಷ್ಮ ಗ್ರಹಿಕೆ ಹೊಂದಿವೆ. ಈ ಹುಲಿಗೆ ಟಿ-7 ಎಂದು ಕೋಡ್‌ವರ್ಡ್ ನೀಡಲಾಗಿದ್ದು, ಈ ಹುಲಿ ಐದಾರು ಬಾರಿ ಜನರೊಂದಿಗೆ ಮುಖಾಮುಖಿಯಾಗಿದ್ದರೂ ದಾಳಿ ಮಾಡುವ ಪ್ರಯತ್ನ ಮಾಡಿಲ್ಲ. ಜನರನ್ನು ಕಂಡ ಈ ಹುಲಿ ಮರಿ ತಾನೇ ಸ್ಥಳದಿಂದ ನಿರ್ಗಮಿಸಿದೆ.


ನ.25ರಿಂದ ದೊಡ್ಡಕಾನ್ಯ, ಚಿಕ್ಕಕಾನ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಟಿ-7 ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಸಿಬ್ಬಂದಿಯ ಕೈಗೆ ಸಿಕ್ಕಿಲ್ಲ. ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿರುವ ಹುಲಿ ಸೆರೆಗೆ ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ. ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮವನ್ನೆಲ್ಲ ಟಿ-7 ಹುಲಿ ವಿಫಲವಾಗುವಂತೆ ಮಾಡಿದೆ. ಇದರಿಂದ ಅರಣ್ಯ ಸಿಬ್ಬಂದಿ ಬಸವಳಿದು ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net