

ಮೈಸೂರು: ಬಣ್ಣಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಟನ್ ಕಬ್ಬಿಗೆ 4 ಸಾವಿರ ರೂ. ದರ ಘೋಷಣೆ ಮಾಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ನಂಜನಗೂಡು ತಾಲೂಕಿನ ಬಣ್ಣಾರಿ ಅಮ್ಮನ್ ಕಾರ್ಖಾನೆ ಎದುರು ಗುರುವಾರ ನಡೆದ ರೈತರ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ, ಬಣ್ಣಾರಿ ಸಕ್ಕರೆ ಕಾರ್ಖಾನೆ ರಾಜ್ಯದಲ್ಲೇ ಅತಿ ಕಡಿಮೆ ದರ ನೀಡುತ್ತಿದೆ. ಈ ಕಾರ್ಖಾನೆ ಕಳೆದ ವರ್ಷ 12.40 ಲಕ್ಷ ಟನ್ ಕಬ್ಬು ಅರೆಸಿ ಸಕ್ಕರೆ ಇಳುವರಿ 9.14 ತೋರಿಸಿದ್ದಾರೆ. ಈ ವರ್ಷ 8 ಲಕ್ಷ ಟನ್ ಕಬ್ಬು ಮಾತ್ರ ರೈತರು ಬೆಳೆದಿದ್ದಾರೆ. ಸಕ್ಕರೆ ಕಾರ್ಖಾನೆಯವರು ರೈತರ ಸಂಘಟನೆ ಒಡೆದು ಆಳುವ ಮೂಲಕ ನಿರಂತರವಾಗಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
2022-23ನೇ ಸಾಲಿನ ವರ್ಷದ ಕಬ್ಬಿನ ಎಫ್‌ಆರ್‌ಪಿ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ದರ 150ರೂ. ಅನ್ನು ಕಾರ್ಖಾನೆ ರೈತರಿಗೆ ನೀಡಬೇಕು. 6 ವರ್ಷಗಳಿಂದ ಸಕ್ಕರೆ ಇಳುವರಿ ಕಡಿಮೆ ತೋರಿಸಿ ರೈತರಿಗೆ ಉಪ ಉತ್ಪನ್ನಗಳ ಲಾಭ ನೀಡುವಲ್ಲಿ ವಂಚನೆ ಮಾಡಿದ್ದು, ಈ ಬಗ್ಗೆ ತನಿಖೆಯಾಗಬೇಕು. ರೈತರ ಸಮಸ್ಯೆ ಪರಿಹಾರ ಮಾಡಬೇಕು. ಅಲ್ಲಿಯವರೆಗೂ ಈ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದಿಲ್ಲ. ಕಾರ್ಖಾನೆಯನ್ನೂ ಪುನರಾರಂಭಿಸಲು ಬಿಡುವುದಿಲ್ಲ. ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಮಾವೇಶದ ಸ್ಥಳಕ್ಕೆ ಬಂದ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಾಹಕ ಅಧ್ಯಕ್ಷ ವೇಲುಸ್ವಾಮಿ ಮಾತನಾಡಿ, ಈ ವರ್ಷ ಪ್ರತಿ ಟನ್ ಕಬ್ಬಿಗೆ 3,150 ರೂ. ದರ ನಿಗದಿಯಾಗಿದೆ. ಕಬ್ಬು ನಾಟಿ ಮಾಡುವ ರೈತರಿಗೆ ಎಕರೆಗೆ 7 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಬಾಕಿ 150 ರೂ. ಪಾವತಿಸುವ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ ಮಾಡಲಾಗುವುದು ಎಂದು ತಿಳಿಸಿದರು.
ನಂಜನಗೂಡು ತಾಲೂಕು ಅಧ್ಯಕ್ಷ ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮುಖಂಡರಾದ ನೀಲಕಂಠಪ್ಪ, ಅಂಬಳೆ ಮಂಜುನಾಥ್, ಸಿದ್ದೇಶ್, ಚಾಮರಾಜನಗರ ಜಿಲ್ಲೆಯ ರೇವಣ್ಣ, ಮಹದೇವಸ್ವಾಮಿ ಶಿವಮೂರ್ತಿ, ಪೈಲ್ವಾನ್ ವೆಂಕಟೇಶ್, ಕಮಲಮ್ಮ ಇನ್ನಿತರರಿದ್ದರು.