

ಹೊಸಪೇಟೆ: ಇಸ್ಪೀಟ್ ಜೂಜು ಕೋರರಿಂದ ೨೦ ಸಾವಿರ ರೂ. ನಗದು ಹಾಗೂ ಮೊಬೈಲ್ ದೋಚಿದ್ದ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.
ಪಟ್ಟಣ ಠಾಣೆಯ ಪೇದೆಗಳಾದ ಮಹೇಶ್, ಅಭಿಷೇಕ, ಮಂಜುನಾಥ ಮತ್ತು ಶ್ರೀಕಾಂತ ಎಂಬುವವರನ್ನು ಬಂಧಿಸಲಾಗಿದೆ.
ದೀಪಾವಳಿ ಹಬ್ಬದ ನಿಮಿತ್ತ ಅ.೨೩ ರಂದು ಬೆಳಗಿನಜಾವ ೩.೩೦ ಗಂಟೆ ಸುಮಾರಿಗೆ ನಗರದ ಹಳೇ ಕೆಇಬಿ ಹಿಂಭಾಗದ ಚಲುವಾದಿ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ನಾಲ್ವರು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಓಡಿ ಹೋಗಿದ್ದು, ವೆಂಕಟೇಶ್ ಮತ್ತು ಪರಸ, ಸತ್ಯೇಶ್ ಸಿಕ್ಕಿಬಿದ್ದಿದ್ದರು. ಅವರಿಂದ ೨೦ ಸಾವಿರ ರೂ. ಮತ್ತು ೩ ಸಾವಿರ ರೂ ಮೌಲ್ಯದ ಫೋನ್ ಕಿತ್ತುಕೊಂಡಿದ್ದರು. ಆದರೆ, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಿರಲಿಲ್ಲ. ದೂರುದಾರ ವೆಂಕಟೇಶ್ ಠಾಣೆಗೆ ಹಾಜರಾದಾಗಲೇ ಪೊಲೀಸರ ಕೈಚಳಕ ಬೆಳಕಿಗೆ ಬಂದಿದೆ.
ತಾವು ಕರ್ತವ್ಯನಿರ್ವಹಿಸುತ್ತಿದ್ದ ಠಾಣೆಯಲ್ಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.