ತುಮಕೂರಿನ ನಾಲ್ವರು ಕರೊನಾಗೆ ಬಲಿ

28Tmk_Corona_Emergency
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿಸಿದೆ. ಒಂದೇ ದಿನ ನಾಲ್ವರು ಬಲಿಯಾಗಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

ಸತತ 4ನೇ ದಿನವಾದ ಮಂಗಳವಾರವೂ ಕರೊನಾ ಶತಕ ಬಾರಿಸಿದೆ. 127 ಹೊಸ ಕರೊನಾ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1473ಕ್ಕೆ ಏರಿಕೆಯಾಗಿದೆ. ತುಮಕೂರು ತಾಲೂಕಿನಲ್ಲಿ ಅತಿಹೆಚ್ಚು 60 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 635ಕ್ಕೇರಿಕೆಯಾಗಿದೆ.

ಕುಣಿಗಲ್-13, ಪಾವಗಡ-10, ತುರುವೇಕೆರೆ-9, ತಿಪಟೂರು-8, ಮಧುಗಿರಿ-7, ಗುಬ್ಬಿ-7, ಶಿರಾ-6, ಕೊರಟಗೆರೆ-6 ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಓರ್ವರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಂಗಳವಾರ 29 ಮಂದಿ ಗುಣಮುಖರಾಗಿ

ಬಿಡುಗಡೆ ಹೊಂದಿದ್ದು, ಈವರೆಗೆ 665 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 761 ಸಕ್ರಿಯ ಪ್ರಕರಣಗಳಿವೆ. ಐವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಬಲಿ: ತುಮಕೂರಿನ ನಾಲ್ವರನ್ನು ಕರೊನಾ ಬಲಿ ಪಡೆದಿದೆ. ಕೆಎಚ್‌ಬಿ ಕಾಲನಿಯ 51 ವರ್ಷದ ಮಹಿಳೆ ಜ್ವರ, ಉಸಿರಾಟ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದು ಜು.24ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, 25ರಂದು ಸಾವನ್ನಪ್ಪಿದ್ದರು. ಈ ವೇಳೆ ಸೋಂಕಿತರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ. ಜೈಪುರದ 70 ವರ್ಷದ ವೃದ್ಧೆ ಸಹ ಜ್ವರ, ತೀವ್ರ ಉಸಿರಾಟದ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದು, ಜು.26 ರಂದು ಸಾವನ್ನಪ್ಪಿದ್ದಾರೆ. ಕೆಎಚ್‌ಬಿ ಕಾಲನಿಯ 68 ವರ್ಷದ ವೃದ್ಧ ಸಹ ಜ್ವರ, ತೀವ್ರ ಉಸಿರಾಟ ತೊಂದರೆ, ನ್ಯುಮೋನಿಯಾಗೆ ತುತ್ತಾಗಿದ್ದು ಜು.27 ರಂದು ಮೃತಪಟ್ಟಿದ್ದಾರೆ. ಕೋವಿಡ್ ಪರೀಕ್ಷೆ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಎಸ್‌ಐಟಿ ಬಡಾವಣೆಯ 65 ವರ್ಷದ ವೃದ್ಧ ಜ್ವರ, ನ್ಯುಮೋನಿಯಾ. ಉಸಿರಾಟ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಕೋವಿಡ್ ಮಾರ್ಗಸೂಚಿಯಂತೆ ಎಲ್ಲರ ಅಂತ್ಯಸಂಸ್ಕಾರ ಮಾಡಲಾಗಿದೆ.

ಕರೊನಾ ಗೆದ್ದ ಮಾಜಿ ಅಧ್ಯಕ್ಷೆ!: ಕರೊನಾ ಸೋಂಕಿನಿಂದ ತುಮಕೂರು ನಗರಸಭೆ ಮಾಜಿ ಅಧ್ಯಕ್ಷೆ ಟಿ.ಎಸ್.ದೇವಿಕಾ ಗುಣವಾಗಿ ಮನೆಗೆ ಮರಳಿದ್ದಾರೆ. ತೀವ್ರ ಜ್ವರ, ಉಸಿರಾಟ ತೊಂದರೆ, ಶ್ವಾಸಕೋಶ ಸೋಂಕು, ನ್ಯುಮೋನಿಯಾದಿಂದ ಬಳಲುತ್ತಿದ್ದ ದೇವಿಕಾ ಕಳೆದ 13 ದಿನಗಳಿಂದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿದ್ದರು. ಬದುಕುವ ಆಸೆಯನ್ನೇ ಕಳೆದುಕೊಂಡಿದ್ದ ದೇವಿಕಾ ಅವರು ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯ ಚಿಕಿತ್ಸೆ, ಆತ್ಮಸ್ಥೈರ್ಯದ ನೆರವಿನಿಂದ ಗೆದ್ದು ಬಂದಿದ್ದಾರೆ. ಸೋಂಕು ತಗುಲಿದ್ದ ಪತಿ ರಮೇಶ್, ತಂದೆ ಸಿದ್ದಲಿಂಗೇಗೌಡ ಹಾಗೂ ಸಹೋದರಿ ವಾಣಿಶ್ರೀ ಸಹ ಗುಣಮುಖರಾಗಿದ್ದಾರೆ.

ಹೆಬ್ಬೂರು ಗ್ರಾಪಂ ಸೀಲ್‌ಡೌನ್: ತುಮಕೂರು ತಾಲೂಕು ಹೆಬ್ಬೂರು ಗ್ರಾಪಂ ಪಿಡಿಒಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 8 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಲ್ ಕಲೆಕ್ಟರ್‌ಗೆ ಜ್ವರ ಕಾಣಿಸಿಕೊಂಡಿದ್ದು, ಅವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ದೃಢಪಟ್ಟಿದೆ. ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿ, ಸೀಲ್‌ಡೌನ್ ಮಾಡಲಾಗಿದೆ.

ಕರೊನಾ ಸೋಂಕು ವಿರುದ್ಧ ಹೋರಾಡಲು ಮನೋಬಲ ಬೇಕು. ಆಸ್ಪತ್ರೆಯ ಪ್ರತಿಯೊಬ್ಬ ಸಿಬ್ಬಂದಿ ಚಿಕಿತ್ಸೆ ಜತೆಗೆ ಆತ್ಮಸ್ಥೈರ್ಯ ತುಂಬಿದರು. ನನಗೆ ಮರುಜನ್ಮ ಸಿಕ್ಕಿದೆ. ಸೋಂಕು ಹರಡದಂತೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದನ್ನು ಎಲ್ಲರೂ ಪಾಲಿಸಬೇಕು. ಪ್ರಾಣಾಯಾಮ, ಧ್ಯಾನ ಸರಳ ಯೋಗಾಭ್ಯಾಸಗಳ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಟಿ.ಎಸ್.ದೇವಿಕಾ ನಗರಸಭೆ ಮಾಜಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net