

ಕೋಲಾರ: ಮತಾಂತರ ನಿಷೇಧ ಕಾಯ್ದೆ ಕುರಿತ ಚರ್ಚೆ ವ್ಯಾಪಕವಾಗಿ ನಡೆಯುತ್ತಿರುವ ನಡುವೆಯೇ ಬಲವಂತದ ಮತಾಂತರ ಯತ್ನ ಪ್ರಕರಣವೊಂದು ಕೋಲಾರದಲ್ಲಿ ಕಂಡುಬಂದಿದೆ. ಮತಾಂತರ ಮಾಡಿಸಲು ಯತ್ನಿಸುತ್ತಿದ್ದ ನಾಲ್ವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿ ನಾಲ್ವರು ಕ್ರಿಶ್ಚಿಯನ್ ಧರ್ಮಪ್ರಚಾರಕರು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವುದು ಕಂಡು ಬಂದಿತ್ತು.
ಇಲ್ಲಿನ ಬೇಬಮ್ಮ ಎನ್ನುವವರ ಮನೆಯಲ್ಲಿ ಈ ಮತಾಂತರ ಯತ್ನ ನಡೆಯುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಮತಾಂತರಕ್ಕೆ ಬಳಸಿದ್ದ ಪುಸ್ತಕ ಹಾಗೂ ಭಿತ್ತಿಪತ್ರಗಳನ್ನ ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾರೆ.
ಮಾಹಿತಿ ತಿಳಿದ ಶ್ರೀನಿವಾಸಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಳಿಕ ನಾಲ್ವರು ಕ್ರಿಶ್ಚಿಯನ್ ಗುರುಗಳು ಹಾಗೂ ಅವರು ಬಂದಿದ್ದ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. ಈ ಧರ್ಮಪ್ರಚಾರಕರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಿಂದ ಬಂದಿರುವ ಧರ್ಮ ಪ್ರಚಾರಕರು.