475 ವಿದ್ಯಾರ್ಥಿಗಳಿಗೆ 4 ಉಪನ್ಯಾಸಕರು! : ಹಾನಗಲ್ಲ ಸರ್ಕಾರಿ ಕಾಲೇಜ್ ಅವ್ಯವಸ್ಥೆ

Hanagal Govt College
Published on

ಹಾನಗಲ್ಲ: ವಿದ್ಯಾರ್ಥಿಗಳಿಗೆ ವಸತಿ ನಿಲಯ, ಆಟದ ಮೈದಾನ, ಪ್ರಯೋಗಾಲಯ, ಗ್ರಂಥಾಲಯ, ಜಿಮ್ ಆಡಿಟೋರಿಯಂ, ತರಗತಿ ಕೊಠಡಿಗಳಲ್ಲಿ ಪ್ರೊಜೆಕ್ಟರ್ ಸೇರಿ ಅತ್ಯುತ್ತಮ ಮೂಲಸೌಲಭ್ಯಗಳಿವೆ. ಆದರೆ, ಪಾಠ ಮಾಡಬೇಕಾದ ಉಪನ್ಯಾಸಕರೇ ಇಲ್ಲದಿದ್ದರೆ ಕಾಲೇಜ್ ಇದ್ದು ಏನು ಪ್ರಯೋಜನ.

ಇದಕ್ಕೆ ಹಾನಗಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಸಾಕ್ಷಿಯಾಗಿದೆ. ಪಟ್ಟಣದ ಹೊರವಲಯದ ಮಲ್ಲಿಗ್ಗಾರದ ಸುಂದರ ಪರಿಸರದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ, ಎಲ್ಲ ವ್ಯವಸ್ಥೆ ಹೊಂದಿದ ಕಾಲೇಜ್ ಕಟ್ಟಡ ನಿರ್ವಿುಸಲಾಗಿದೆ. ಕಳೆದ ವರ್ಷ ಈ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. 40ಕ್ಕೂ ಅಧಿಕ ಅತಿಥಿ ಉಪನ್ಯಾಸಕರಿದ್ದರು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳೇ ಕಳೆದಿವೆ. ಈವರೆಗೆ ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳನ್ನು ಹಿಡಿದಿಡುವುದು ಹರಸಾಹಸವಾಗಿದೆ. ಪಾಠಗಳು ಸಮರ್ಪಕವಾಗಿ ನಡೆಯದೇ, ವಿದ್ಯಾರ್ಥಿಗಳು ಕಾಲಹರಣಕ್ಕಾಗಿ ಕಾಲೇಜಿಗೆ ಬಂದು ಹೋಗುವಂತಾಗಿದೆ. ಹೀಗಾದರೆ, ತಮ್ಮ ಭವಿಷ್ಯವೇನು, ಪರೀಕ್ಷೆಯಲ್ಲಿ ಉತ್ತರಿಸುವುದೇನು ಎಂಬ ಆತಂಕ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನೂ ಕಾಡಲಾರಂಭಿಸಿದೆ.

ಉಪನ್ಯಾಸಕರ ನೇಮಕವಾಗದ ಕಾರಣ ಪ್ರಸ್ತುತ ವರ್ಷ ಪ್ರಥಮ ವರ್ಷದ ವಾಣಿಜ್ಯ ವಿಭಾಗಕ್ಕೆ 37, ಕಲಾ ವಿಭಾಗಕ್ಕೆ 36, ವಿಜ್ಞಾನ ವಿಭಾಗಕ್ಕೆ 50 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಮೂರು ವಿಭಾಗ ಸೇರಿ 475 ವಿದ್ಯಾರ್ಥಿಗಳಿದ್ದಾರೆ. ಇದಲ್ಲದೆ ಸ್ನಾತಕೋತ್ತರ ಪದವಿ ವಿಭಾಗವೂ ನಡೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾರ್ಯಭಾರಕ್ಕೆ ತಕ್ಕಂತೆ ಉಪನ್ಯಾಸಕರು ಬೇಕು. ಆದರೆ, ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೂ ಮುಂದಾಗಿಲ್ಲ. ಇರುವ ನಾಲ್ವರು ಉಪನ್ಯಾಸಕರು, ಪ್ರಾಚಾರ್ಯರೇ ಎಲ್ಲ ಕಾರ್ಯಭಾರ ನಿರ್ವಹಿಸುತ್ತಿದ್ದಾರೆ.

ಈ ಕಾಲೇಜು ಉತ್ತಮ ಪ್ರತಿವರ್ಷ ಉತ್ತಮ ಫಲಿತಾಂಶ ನೀಡುತ್ತ ಬಂದಿದೆ. ಕಳೆದ ವರ್ಷ ಅಂತಿಮ ವರ್ಷದ ಬಿಕಾಂನಲ್ಲಿ ಶೇ. 96, ಕಲಾ ವಿಭಾಗದಲ್ಲಿ ಶೇ. 84, ವಿಜ್ಞಾನ ವಿಭಾಗದಲ್ಲಿ ಶೇ. 100ರಷ್ಟು ಫಲಿತಾಂಶ ಬಂದಿದೆ. ಕಾಲೇಜಿಗೆ ಉಪನ್ಯಾಸಕರನ್ನು ನೀಡಿದಿದ್ದರೆ, ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಗಳಿವೆ.

ಸಾರಿಗೆ ಸಮಸ್ಯೆ: ಪಟ್ಟಣದಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಬಂದು-ಹೋಗಲು ವಿದ್ಯಾರ್ಥಿಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲ. ಹುಬ್ಬಳ್ಳಿ, ಬಂಕಾಪುರ, ಶಿಗ್ಗಾಂವಿ ಬಸ್​ಗಳನ್ನೆ ಅವಲಂಬಿಸಬೇಕಾಗಿದೆ. ಅವುಗಳು ಕೂಡ ತುಂಬಿ ಓಡಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಪಾಠ-ಪ್ರವಚನಕ್ಕೆ ಕಾಲೇಜಿನಲ್ಲಿ ಯಾವುದೇ ಕೊರತೆಯಿಲ್ಲ. ಇಲ್ಲಿ ಉತ್ತಮ ಪಾಠಗಳು ನಡೆಯುತ್ತವೆ. ಆದರೆ, ಅತಿಥಿ ಉಪನ್ಯಾಸಕರೇ ಹೆಚ್ಚು ಪಾಲು ಬೇಕಾಗಿರುವುದರಿಂದ ಪಾಠಗಳಿಗೆ ಅಡಚಣೆಯಾಗಿದೆ. ಕೇವಲ 4 ಉಪನ್ಯಾಸಕರು ಇರುವುದರಿಂದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಹಾಗೂ ಸ್ನಾತಕೋತ್ತರ ವಿಭಾಗ ಮುನ್ನಡೆಸಲು ಕಷ್ಟವಾಗಿದೆ. ಇರುವ ಉಪನ್ಯಾಸಕರು ಹಾಗೂ ನಾನು ಸಾಧ್ಯವಾದಷ್ಟು ಪಾಠ ಮಾಡುತ್ತಿದ್ದೇವೆ. | ಡಾ.ಸಿ.ಎಸ್. ಕುಮ್ಮೂರ, ಪ್ರಾಚಾರ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net