

ಶಿವಮೊಗ್ಗ: ಡಿಜಿಟಲ್ ಅರೆಸ್ಟ್‌ಗೆ ಶಿವಮೊಗ್ಗದಲ್ಲಿ ಮತ್ತೊಬ್ಬರು ಸಿಲುಕಿದ್ದು ಬರೋಬ್ಬರಿ ನಾಲ್ಕು ಲಕ್ಷ ರೂ. ಕಳೆದುಕೊಂಡಿದ್ದಾರೆ. 23 ವರ್ಷದ ಯುವತಿಗೆ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ 4 ಲಕ್ಷ ರೂ. ವಂಚಿಸಲಾಗಿದೆ.
ಮುಂಬೈನಿಂದ ಇರಾನ್‌ಗೆ ತಮ್ಮ ಹೆಸರಿನಲ್ಲಿ ಪಾರ್ಸಲ್ ಹೋಗುತ್ತಿದ್ದು ಅದರಲ್ಲಿ ಡ್ರಗ್ಸ್ ಇರುವುದಾಗಿ ನಂಬಿಸಿ ವಿಚಾರಣೆ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ. ಮುಂಬೈ ಸೈಬರ್ ಪೊಲೀಸ್ ಎಂದು ಕರೆ ಮಾಡಿ ಯುವತಿಯ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಯುವತಿ ಹೆಸರಿನಲ್ಲಿ ಇರಾನ್‌ಗೆ ಪಾರ್ಸಲ್ ಹೋಗುತ್ತಿದೆ. ಆ ಬಗ್ಗೆ ಮುಂಬೈ ಸೈಬರ್ ಕ್ರೈಮ್ ಪೊಲೀಸರು ಮಾತನಾಡುತ್ತಾರೆಂದು ಕರೆಯನ್ನು ಕನೆಕ್ಟ್ ಮಾಡಿದ್ದ. ಪೊಲೀಸರಂತೆ ಮಾತನಾಡಿದ ಮತ್ತೊಬ್ಬ ವ್ಯಕ್ತಿ, ಪಾರ್ಸಲ್‌ನಲ್ಲಿ ಒಂದು ಲ್ಯಾಪ್‌ಟಾಪ್, 5 ಕ್ರೆಡಿಟ್ ಕಾರ್ಡ್, 420 ಗ್ರಾಂ ಡ್ರಗ್ಸ್ ಇದೆ. ಈ ಬಗ್ಗೆ ವಿಚಾರಣೆ ಮಾಡಬೇಕೆಂದು ಬೆದರಿಕೆ ಹಾಕಿದ್ದ.
ವಿಚಾರಣೆ ನೆಪದಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ತಕ್ಷಣ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದ. ಯುವತಿಯ ಬ್ಯಾಂಕ್ ಖಾತೆಗೆ 3.80 ಲಕ್ಷ ರೂ. ಸಾಲ ದೊರೆತಿತ್ತು. ಪೊಲೀಸ್ ಸೋಗಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಎರಡು ಬ್ಯಾಂಕ್ ಖಾತೆಯ ವಿವರ ನೀಡಿ ಅವುಗಳಿಗೆ ತಲಾ ಎರಡು ಲಕ್ಷ ರೂ. ವರ್ಗಾಯಿಸುವಂತೆ ಸೂಚಿಸಿದ್ದ. ಅಂತೆಯೇ ಯುವತಿ ಹಣ ವರ್ಗಾಯಸಿದ್ದಳು. ಬಳಿಕ ವಂಚನೆಗೆ ಒಳಗಾಗಿರುವುದು ಅರಿವಾಗುತ್ತಿದ್ದಂತೆ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.