4 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ

web4
ಚಿಕ್ಕೋಡಿ ತಾಲೂಕಿನ ಜೈನಾಪುರದಲ್ಲಿ ಅರಿಹಂತ ಶುಗರ್ಸ್‌ 7ನೇ ಕಬ್ಬು ನುರಿಸುವ ಹಂಗಾಮಿಗೆ ಸಂಸ್ಥಾಪಕ ಉತ್ತಮ ಪಾಟೀಲ ಹಾಗೂ ಅಭಿನಂದನ ಪಾಟೀಲ, ಲಕ್ಷ್ಮಣರಾವ ಚಿಂಗಳೆ ಚಾಲನೆ ನೀಡಿದರು. ಸುಭಾಷ ಜೋಶಿ, ಇಂದ್ರಜೀತ್ ಪಾಟೀಲ, ಶ್ಯಾಮ ರೇವಡೆ ಇತರರು ಇದ್ದರು
Published on

ಚಿಕ್ಕೋಡಿ: ಶ್ರೀಅರಿಹಂತ ಶುಗರ್ಸ್‌ ಇಂಡಸ್ಟ್ರೀಜ್ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷದಲ್ಲಿ 4 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಸಂಸ್ಥಾಪಕ ಉತ್ತಮ ಪಾಟೀಲ ಹೇಳಿದರು.

ತಾಲೂಕಿನ ಜೈನಾಪುರ ಶ್ರೀಅರಿಹಂತ ಶುಗರ್ಸ್‌ ಇಂಡಸ್ಟ್ರೀಜ್ ಲಿ.ನ 7ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಹೆಚ್ಚಿನ ಕಬ್ಬು ಕಾರ್ಖಾನೆಗೆ ಕಳುಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.

ಕಾರ್ಖಾನೆಯ ರೈತರಿಗೆ ಹೆಚ್ಚು ದರ ನೀಡುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಕ್ಕರೆ ಉತ್ಪಾದನೆ ಹೊರತು ಪಡಿಸಿ ಪರ‌್ಯಾಯ ಉತ್ಪಾದನೆ ಇಲ್ಲದೆ ಕೇವಲ ಸಕ್ಕರೆ ಉತ್ಪಾದಿಸಿ ರೈತರಿಗೆ ಹೆಚ್ಚು ದರ ನೀಡಿದೆ. ಪ್ರಸಕ್ತ ವರ್ಷದಲ್ಲಿಯೂ ಕಾರ್ಖಾನೆಗೆ ಕಬ್ಬು ಕಳುಹಿಸಿದ ರೈತರಿಗೆ ಎಫ್‌ಆರ್‌ಪಿ ದರ ನೀಡುವುದಾಗಿ ಹೇಳಿದರು.

ಕಾರ್ಖಾನೆ ಆರಂಭ ಮಾಡಲು ರಾಜ್ಯ ಸರ್ಕಾರ ನ.15 ತನಕ ಗಡುವು ನೀಡಿದೆ. ಶುಭ ಮುಹೂರ್ತ ಇರುವ ಕಾರಣದಿಂದ ಪ್ರಸಕ್ತ ವರ್ಷದ ಹಂಗಾಮಿಗೆ ಚಾಲನೆ ನೀಡಲಾಗಿದೆ. ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಕಾರ್ಖಾನೆ ಆರಂಭ ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಡಿಸ್ಟಲರಿ ಮತ್ತು ಇಥೆನಾಲ್ ಘಟಕ ಆರಂಭ ಮಾಡುವ ಚಿಂತನೆ ಇದೆ.

ಅರಿಹಂತ ಸಕ್ಕರೆ ಕಾರ್ಖಾನೆಯು ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದೆ ಎಂದರು. ಚಿಕ್ಕೋಡಿ ತಾಲೂಕಿನ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಈಗಾಗಲೇ ಮಂಜೂರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಿಲ್ಲೆಯ ಹಿರಿಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಎರಡು

ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ನೀರಾವರಿ ವಂಚಿತ ಹಳ್ಳಿಯ ರೈತರಿಗೆ ಅನುಕೂಲ ಕಲ್ಪಿಸಿ, ರೈತರು ಕಬ್ಬು ಬೆಳೆದರೆ ಕಾರ್ಖಾನೆಗೆ ಹೆಚ್ಚು ಕಬ್ಬು ಬರಲಿದೆ ಎಂದು ತಿಳಿಸಿದರು.

ಕಾರ್ಖಾನೆಯ ಮುಖಂಡರಾದ ಅಭಿನಂದನ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಶಾಸಕ ಸುಭಾಷ ಜೋಶಿ, ದತ್ತು ಸಕ್ಕರೆ ಕಾರ್ಖಾನೆ ನಿರ್ದೇಶಕ ಇಂದ್ರಜೀತ್ ಪಾಟೀಲ, ಪುರಸಭೆ ಸದಸ್ಯ ಶ್ಯಾಮ ರೇವಡೆ, ಮಹಾವೀರ ದೊಂಡಗೆ, ಅರುಣ ದೇಸಾಯಿ, ಮೀನಾಕ್ಷಿ ಪಾಟೀಲ, ದೀಪಾಲಿ ಪಾಟೀಲ, ಯುವರಾಜ ಪಾಟೀಲ, ಸಿಇಒ ಆರ್.ಕೆ.ಶೆಟ್ಟಿ ಉಪಸ್ಥಿತರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net