4 ಸರ್ಕಾರಿ ಶಾಲೆ ಬಂದ್ !

School bund
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ, ಶಿಕ್ಷಕರ ಕೊರತೆ, ಖಾಸಗಿ ಶಾಲೆಗಳತ್ತ ಪಾಲಕರ ಆಕರ್ಷಣೆ, ಮತ್ತಿತರ ಕಾರಣಗಳಿಂದ ಕಳೆದ ವರ್ಷ ಎರಡು ಸರ್ಕಾರಿ ಶಾಲೆಗಳು ಮುಚ್ಚಿದ್ದವು. ಈ ವರ್ಷವೂ ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿ ರಟ್ಟಿಹಳ್ಳಿ ತಾಲೂಕಿನ ಕವಳಿಕೊಪ್ಪಿ ಗ್ರಾಮದ ಹಾಗೂ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ಗ್ರಾಮದ ಸರ್ಕಾರಿ ಶಾಲೆ ಬಂದ್ ಮಾಡಲಾಗಿತ್ತು. ಈ ವರ್ಷ ರಾಣೆಬೆನ್ನೂರ ತಾಲೂಕಿನ ಕರಲಗೇರಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬ್ಯಾಡಗಿ ತಾಲೂಕಿನ ಹೊಸ ಕುಮ್ಮೂರ ಗ್ರಾಮದ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲಾಗಿದೆ.

ಒಬ್ಬ ವಿದ್ಯಾರ್ಥಿ ಇದ್ದರೂ ಆ ಶಾಲೆಯನ್ನು ಮುಚ್ಚದಿರಲು ಸರ್ಕಾರ ಆದೇಶಿಸಿದೆ. ಆದರೆ, ಒಬ್ಬ ವಿದ್ಯಾರ್ಥಿಯೂ ಶಾಲೆಗೆ ದಾಖಲಾಗದಿದ್ದಲ್ಲಿ ಅಂತಹ ಶಾಲೆಗಳನ್ನು ಮಾತ್ರ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತದೆ. ಮೂರು ವರ್ಷಗಳವರೆಗೆ ಹೀಗೆಯೇ ಮುಂದುವರಿದರೆ ನಂತರ ಶಾಶ್ವತವಾಗಿ ಮುಚ್ಚಲಾಗುತ್ತದೆ. ರಟ್ಟಿಹಳ್ಳಿ ತಾಲೂಕಿನ ಕವಳಿಕೊಪ್ಪಿ ಹಾಗೂ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ಶಾಲೆಗಳಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಬಾಗಿಲು ತೆಗೆದಿಲ್ಲ.

ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯ ಕೊರತೆ, ಶಿಕ್ಷಕರ ಕೊರತೆ, ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಳ ಮತ್ತಿತರ ಕಾರಣಗಳಿಂದ ಜನ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ನಗರ ಕೇಂದ್ರಿತವಾಗಿದ್ದ ಖಾಸಗಿ ಶಾಲೆಗಳು, ಗ್ರಾಮೀಣ ಭಾಗದಲ್ಲೂ ಬೇರು ಗಟ್ಟಿ ಮಾಡಿಕೊಳ್ಳುವಲ್ಲಿ ಎಲ್ಲ ರೀತಿಯಲ್ಲೂ ಸಕ್ರಿಯವಾಗಿವೆ. ಈ ನಡುವೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ಕೆಲ ಶಾಲೆಗಳು ವಿಫಲವಾಗುತ್ತಿವೆ. ಇದರಿಂದ ಅಂತಹ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕಡಿಮೆಯಾಗುತ್ತ ಸಾಗುತ್ತಿದೆ.

ಕನ್ನಡ ಶಾಲೆಗಳ ಉಳಿವಿಗಾಗಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಚ್ಚಿದ ಶಾಲೆಗಳ ಕುರಿತು ಸಮಗ್ರ ಅಧ್ಯಯನ ನಡೆಸಬೇಕು. ಮುಂದಿನ ವರ್ಷ ಆ ಶಾಲೆಗಳು ಮತ್ತೆ ಆರಂಭಗೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಆಗ್ರಹವಾಗಿದೆ.

ಸಿಎಂ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 25ರಂದು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು. ಸರಿಪಡಿಸುವಂತೆ ಎಲ್ಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಮತ್ತೆರಡು ಶಾಲೆಗಳು ಮುಚ್ಚಿರುವುದು ಜಿಲ್ಲೆಯ ಶಿಕ್ಷಣ ಪ್ರಗತಿಗೆ ಹಿಡಿದ ಕೈಗನ್ನಡಿಯಂತಾಗಿದೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿಗಾಗಿ ಸಾಕಷ್ಟು ಪ್ರಚಾರ ಮಾಡಿದ್ದೇವೆ. ಆದರೂ ನಾಲ್ಕು ಶಾಲೆಗಳಲ್ಲಿ ಈ ವರ್ಷ ಶೂನ್ಯ ದಾಖಲಾತಿಯಾಗಿದೆ. ಹಾಗಾಗಿ, ಈ ಶಾಲೆಗಳನ್ನು ತಾತ್ಕಾಲಿಕವಾಗಿ ಮಾತ್ರ ಬಂದ್ ಮಾಡಲಾಗಿದೆ. ಮುಂದಿನ ವರ್ಷ ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.I ಗಿರೀಶ ಪದಕಿ, ಡಿಡಿಪಿಐ (ಪ್ರಭಾರಿ) ಕರಲಗೇರಿ ಗ್ರಾಮದಲ್ಲಿ ಮನೆಗಳ ಸಂಖ್ಯೆ ಕಡಿಮೆ ಇದೆ. ಪಾಲಕರು ಹಾಗೂ ಮಕ್ಕಳ ಮನವೊಲಿಸಿದರೂ ದಾಖಲಾತಿ ಸಾಧ್ಯವಾಗಲಿಲ್ಲ. ಮಕ್ಕಳು ಬಂದರೆ ಮತ್ತೆ ಆರಂಭಿಸುತ್ತೇವೆ. ಇದ್ದ ಶಿಕ್ಷಕರನ್ನು ಪಕ್ಕದ ಮಣಕೂರ ಪ್ಲಾಟ್ ಶಾಲೆಗೆ ವರ್ಗಾಯಿಸಲಾಗಿದೆ.I ಎಂ.ಎಚ್. ಪಾಟೀಲ, ಬಿಇಒ, ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net