ಕಾವೇರಿ ನದಿಯಲ್ಲಿ ಮುಳುಗಿ ನಾಲ್ವರ ಸಾವು

26hgr1
Published on

ಹಲಗೂರು : ಪ್ರಸಿದ್ಧ ಯಾತ್ರಾ ಸ್ಥಳ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ನಾಗೇಶ್ (40) ಇವರ ಮಗನಾದ ಭರತ್ (17), ಸಂಬಂಧಿಕರಾದ ಮಹದೇವ (16) ಗುರು (32) ಮೃತರು. ಮೂಲತಃ ಮೈಸೂರಿನ ಕನಕನಗರದ ಭಾಗ್ಯಮ್ಮ ರಾಜು ಎಂಬುವರು ಮುತ್ತತ್ತಿಯ ಆಂಜನೇಯ ಸ್ವಾಮಿಗೆ ಹರಕೆ ತೀರಿಸುವುದಕ್ಕಾಗಿ ತಮ್ಮ ಕುಟುಂಬದವರೊಂದಿಗೆ ಕ್ಷೇತ್ರಕ್ಕೆ ಬಂದಿದ್ದರು. ದೇವರ ದರ್ಶನ ಪಡೆದ ಮೇಲೆ ಬೇಸಿಗೆಯ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಕಾವೇರಿ ನದಿಯಲ್ಲಿ ಸ್ನಾನ ಮಾಡಲು ನಾಗೇಶ್ ಮುಂದಾದರು. ನಾಗೇಶ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದರು. ಅವರನ್ನು ರಕ್ಷಿಸಲು ಹೋದ ಅವರ ಮಗನಾದ ಭರತ್ ಸಹಾ ನೀರಿನಲ್ಲಿ ಮುಳುಗಿದ. ಅವರಿಬ್ಬರನ್ನೂ ರಕ್ಷಿಸಲು ಹೋದ ಸಂಬಂಧಿಕರಾದ ಮಹದೇವ ಮತ್ತು ಗುರು ಎಂಬವರೂ ನೀರುಪಾಲಾದರು.
ಮೈಸೂರಿನ ನಾಗೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಅವರ ಮಗ ದ ಭರತ್ ಸಹ ಅದೇ ವೃತ್ತಿಯಲ್ಲಿದ್ದ. ಮಹಾದೇವ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಗುರು ಬೆಂಗಳೂರಿನ ತ್ಯಾಗರಾಜನಗರದಲ್ಲಿ ಫುಡ್ ಡೆಲಿವರಿ ಸೇವೆಯಲ್ಲಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ.
ನಾಲ್ವರ ಮೃತ ದೇಹಗಳನ್ನು ನದಿಯಿಂದ ಹೊರ ತೆಗೆದು ಮಳವಳ್ಳಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ನೀಡಲಾಯಿತು.
ವಿಷಯ ತಿಳಿದ ಸ್ಥಳಕ್ಕೆ ತಹಶೀಲ್ದಾರ್ ಲೋಕೇಶ್, ಡಿವೈಎಸ್‌ಪಿ ಕೃಷ್ಣಪ್ಪ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ನಾಗೇಶ್ ಅವರ ಪತ್ನಿ ಮಂಜುಳಾ ನೀಡಿದ ದೂರು ದಾಖಲಿಸಿ ಕ್ರಮ ವಹಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಮೃತರ ಕುಟುಂಬದವರ ಗೋಳು ಮುಗಿಲು ಮುಟ್ಟಿತ್ತು. ಕುಟುಂಬಕ್ಕೆ ಆಧಾರವಾಗಿದ್ದ ನಾಗೇಶ್ ಮತ್ತವರ ಮಗ ಅಕಾಲಿಕ ಸಾವಿಗೆ ಈಡಾಗಿದ್ದು, ಪತ್ನಿ ಮತ್ತು ಪುತ್ರಿ ಕಂಗಾಲಾಗಿದ್ದಾರೆ. ಕಾವೇರಿ ನದಿ ದಡದಲ್ಲಿ ಜಿಲ್ಲಾಡಳಿತ ಅಪಾಯದ ಸೂಚನಾ ಫಲಕಗಳನ್ನು ಹಾಕಿದ್ದರೂ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದು ಹೃದಯ ಕಲಕುವ ದುರ್ಘಟನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net