

ಮಂಗಳೂರು: ವಿಮಾನ ಸಂಸ್ಥೆ ನೌಕರ, ಬಹರೈನ್‌ಗೆ ಕೆಲಸಕ್ಕಾಗಿ ತೆರಳಲು ಬಯಸಿದ್ದ ಯುವತಿ ಸಹಿತ ದ.ಕ ಜಿಲ್ಲೆಯ ನಾಲ್ವರಿಗೆ ಕರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ.
ಬೆಳ್ತಂಗಡಿ ತಾಲೂಕಿನ ಕಲ್ಲೇರಿ ನಿವಾಸಿ 45 ವರ್ಷದ ಮಹಿಳೆಗೆ ಉಸಿರಾಟ ತೊಂದರೆ ಕಾಣಿಸಿದ್ದು, ಅವರ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ಯಾವ ಸಂಪರ್ಕದಿಂದ ಸೋಂಕು ತಗುಲಿದೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದು, ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಸೋಮವಾರ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮನೆಯಲ್ಲಿ ಗಂಡ, ಒಂದು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದು ಮನೆಯನ್ನು ಮಾತ್ರ ಸೀಲ್‌ಡೌನ್ ಮಾಡಿರುವುದರಿಂದ ಮನೆ ಮಂದಿ ಹೊರಗಡೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.
ಸುರತ್ಕಲ್ ಮೂಲದ 24ರ ಯುವತಿ ಬಹರೈನ್‌ನಲ್ಲಿ ಉದ್ಯೋಗಿಯಾಗಿದ್ದು ಫೆಬ್ರವರಿಯಲ್ಲಿ ಪುಣೆಗೆ ಬಂದು ಅಲ್ಲಿಂದ ಮಂಗಳೂರಿಗೆ ಬಂದಿದ್ದರು. ಮತ್ತೆ ಬಹರೈನ್‌ಗೆ ತೆರಳಲು ಇಚ್ಛಿಸಿದ್ದು, ಖಾಸಗಿ ಪ್ರಯೋಗಾಲಯದಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಯನ್ನೂ ಮಾಡಿಸಿದ್ದರು. ಸೋಮವಾರ ಬಂದ ವರದಿಯಲ್ಲಿ ಅವರಿಗೆ ಸೋಂಕು ದೃಢಪಟ್ಟಿದೆ. ಅವರಿಗೆ ಎಲ್ಲಿಂದ ಸೋಂಕು ತಗುಲಿದೆ ಎನ್ನುವುದು ಗೊತ್ತಾಗಿಲ್ಲ.
ಮೇ 20ರಂದು ಆಗಮಿಸಿದ್ದ ವಿಮಾನದ ಸಿಬ್ಬಂದಿ, 27ರ ಯುವಕ ನಾಗರಿಕ ವಿಮಾನಯಾನ ಸಚಿವಾಲಯದ ನಿಯಮಾವಳಿಯಂತೆ ಪುನಃ ಕರ್ತವ್ಯಕ್ಕೆ ಹಾಜರಾಗುವ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದ್ದು, ಜೂ.1ರಂದು ಸ್ವೀಕೃತವಾದ ಅವರ ವರದಿಯಲ್ಲೂ ಪಾಸಿಟಿವ್ ಬಂದಿದೆ.
ಗುಜರಾತ್‌ನಿಂದ ಹಿಂದಿರುಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದ 50 ವರ್ಷದ ಪುರುಷನಿಗೆ ಕರೊನಾ ದೃಢಪಟ್ಟಿರುವುದು ಸೋಮವಾರದ ಜಿಲ್ಲೆಯ ನಾಲ್ಕನೇ ಪ್ರಕರಣ.
74 ಸಕ್ರಿಯ ಪ್ರಕರಣ: ಸೋಮವಾರ 32 ಮಂದಿಯನ್ನು ತಪಾಸಣೆ ಮಾಡಲಾಗಿದ್ದು, 49 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದೆ. ಸಿಕ್ಕಿರುವ 81ರಲ್ಲಿ ನಾಲ್ಕು ಪಾಸಿಟಿವ್. ಇನ್ನೂ 193ರ ವರದಿ ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 74 ಸಕ್ರಿಯ ಕರೊನಾ ಪಾಸಿಟಿವ್ ಪ್ರಕರಣಗಳಿದ್ದು, 56 ಮಂದಿ ಬಿಡುಗಡೆಗೊಂಡಿದ್ದಾರೆ.
ಕಾಸರಗೋಡು 14 ಪಾಸಿಟಿವ್
ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ 14 ಮಂದಿ ಒಳಗೊಂಡಂತೆ ಕೇರಳದಲ್ಲಿ 57 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ. 27 ಮಂದಿ ವಿದೇಶದಿಂದ, 28 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದರೆ, ಒಬ್ಬರು ಏರ್ ಇಂಡಿಯಾ ಸಿಬ್ಬಂದಿ ಹಾಗೂ ಇನ್ನೊಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ. ರಾಜ್ಯದಲ್ಲಿ ಸೋಮವಾರ 18 ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.