ಹಂದಿ ಸಾಕಲು 4 ಎಕರೆ ಜಾಗ ; ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ ನೀಡಲು ನಿರ್ಧಾರ

18Tmk_Palike_Pig
Published on

ತುಮಕೂರು: ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದಲ್ಲೇ ಹಂದಿ ಸಾಕಾಣಿಕೆಗೆ ತಾತ್ಕಾಲಿಕವಾಗಿ 4 ಎಕರೆ ಜಾಗ ನೀಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ.

ಪಾಲಿಕೆ ಮೇಯರ್ ಕಚೇರಿಯಲ್ಲಿ ಗುರುವಾರ ಮೇಯರ್ ಫರೀದಾ ಬೇಗಂ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಹಂದಿ ಸಾಕಣೆದಾರರ ಸಭೆಯಲ್ಲಿ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದ 40 ಎಕರೆ ಜಾಗದಲ್ಲಿ 4 ಎಕರೆಯನ್ನು ಸಾಕಾಣಿಕೆಗೆ ತಾತ್ಕಾಲಿಕ ವ್ಯವಸ್ಥೆಯಾಗಿ ನೀಡಲಾಗುವುದು ಎಂದು ಆಯುಕ್ತ ಟಿ.ಭೂಬಾಲನ್ ಭರವಸೆ ನೀಡಿದರು.

ಅಜ್ಜಗೊಂಡನಹಳ್ಳಿಯಲ್ಲಿ 24/7 ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಸುರಕ್ಷತೆ ಕಲ್ಪಿಸಲು ಪಾಲಿಕೆ ಸಿದ್ಧವಿದೆ. ನಗರದ ಎಲ್ಲ ಹಂದಿಗಳನ್ನು ಅಲ್ಲಿಗೆ ಸಾಗಿಸುವಂತೆ ಮೇಯರ್ ಫರೀದಾಬೇಂಗಂ ಹೇಳಿದರು.

ಪಾಲಿಕೆ ಸದಸ್ಯ ಸೈಯದ್ ನಯಾಜ್ ಮಾತನಾಡಿ, ನಗರದಲ್ಲಿ ಬಿಡಾಡಿ ಹಂದಿಗಳ ಹಾವಳಿಯಿಂದ ಅಪಘಾತಗಳು ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದ್ದು ನಾಗರಿಕ ಸಮಿತಿಗಳು, ಸಾರ್ವಜನಿಕರಿಂದ ಹಂದಿ ಹಿಡಿಯುವಂತೆ ಸಾಕಷ್ಟು ಒತ್ತಡ ಬಂದಿದೆ. ಹಾಗಾಗಿ, ನಗರದಿಂದ ಹೊರಗಡೆ ಸಾಗಾಕಬೇಕಿದೆ. ಗುಬ್ಬಿ ಸಮೀಪವಿರುವ ಗೋಶಾಲೆಯಂತೆ ಹಂದಿ ಸಾಕಾಣಿಕೆಗೆ ಜಾಗ ಗುರುತಿಸಿ ಒಂದೇ ಕಡೆ ಸಾಕಾಣಿಕೆಗೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಸಲಹೆಯಿತ್ತರು.

ಶಾಶ್ವತ ನೆಲೆಗೆ ಪಟ್ಟು: ಹಂದಿಜೋಗರಿಗೆ ಅಣ್ಣೇನಹಳ್ಳಿಯಲ್ಲಿ ಸರ್ಕಾರ ಗುರುತಿಸಿರುವ ಜಾಗದಲ್ಲಿ ಶಾಶ್ವತ ನೆಲೆ ಕಲ್ಪಿಸಬೇಕು. 50 ವರ್ಷಗಳಿಂದ ಹಂದಿ ಸಾಕಾಣಿಕೆ ಮಾಡಿಕೊಂಡು ಬಂದಿದ್ದು ನಮಗೆ ವಾಸಿಸಲು ಸೂರಿಲ್ಲ. ಮೊದಲು ಬೇಡಿಕೆಗಳನ್ನು ಈಡೇರಿಸಿದರೆ ನಗರದಿಂದ ಕಾಲು ತೆಗೆಯುತ್ತೇವೆ ಎಂದು ಸಂಘದ ರಾಜ್ಯಾಧ್ಯಕ್ಷೆ ರಾಮಕ್ಕ ಹೇಳಿದರು. ಶಾಶ್ವತ ನೆಲೆ ಕಲ್ಪಿಸಲು ಪಾಲಿಕೆಗೆ ಅಧಿಕಾರವಿಲ್ಲ. ಆ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ. ಸದ್ಯಕ್ಕೆ ಅಜ್ಜಗೊಂಡನಹಳ್ಳಿಯಲ್ಲಿ ಸಾಕಾಣಿಕೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುತ್ತೇವೆ. ನಗರದ ಹಿತದೃಷ್ಟಿಯಿಂದ ಸಹಕರಿಸಬೇಕು ಎಂದು ಫರೀದಾಬೇಗಂ ತಿಳಿಸಿದರು.

ಉಪಮೇಯರ್ ಶಶಿಕಲಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ನರಸಿಂಹಮೂರ್ತಿ, ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಎಸ್.ಮಂಜುನಾಥ್, ಜೆ.ಕುಮಾರ್, ಶಿವರಾಮು, ವಿಷ್ಣುವರ್ಧನ್, ಮಾಜಿ ಕಾರ್ಪೋರೇಟರ್ ಸುಧೀಶ್ವರ್, ಡಿವೈಎಸ್ಪಿ ತಿಪ್ಪೇಸ್ವಾಮಿ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗೇಶ್‌ಕುಮಾರ್, ಹಂದಿಜೋಗರ ನಗರ ಅಧ್ಯಕ್ಷ ಗೋಪಿ, ಅರ್ಜುನ್, ಸುರೇಶ್ ಇದ್ದರು.

ಅಜ್ಜಗೊಂಡನಹಳ್ಳಿಗೆ ಭೇಟಿ : ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ 4 ಎಕರೆ ಜಾಗವನ್ನು ಪ್ರತ್ಯೇಕವಾಗಿ ಹಂದಿ ಸಾಕಾಣಿಕೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಸೋಮವಾರ ಹಂದಿಜೋಗರೊಂದಿಗೆ ಮೇಯರ್, ಪಾಲಿಕೆ ಸದಸ್ಯರು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಹಂದಿಜೋಗರಿಗೆ ಮನವರಿಕೆ ಮಾಡಲಾಗುವುದು ಎಂದು ಆಯುಕ್ತ ಟಿ.ಭೂಬಾಲನ್ ತಿಳಿಸಿದರು.

ಬಿಡಾಡಿ ಹಂದಿ ಹಂದಿಗಳನ್ನು ಸುರಕ್ಷಿತವಾಗಿ ಹಿಡಿದು ಹೊರಗಡೆ ಸಾಗಿಸಲು ಸಾಕಾಣಿಕೆದಾರರು ಅಡ್ಡಿಪಡಿಸುತ್ತಿರುವ ದೂರುಗಳಿವೆ. ಇನ್ಮುಂದೆ ಈ ರೀತಿ ಪಾಲಿಕೆ ಸಿಬ್ಬಂದಿ ಮೇಲೆ ದಾಳಿ ಮಾಡಿದರೆ ಎಫ್‌ಐಆರ್ ಹಾಕಿ ಕ್ರಮಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. ತಿಪ್ಪೇಸ್ವಾಮಿ ಡಿವೈಎಸ್ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net