

ಶೃಂಗೇರಿ: ಮ್ಯಾಮ್ಕೋಸ್ ಪ್ರಸಕ್ತ ವರ್ಷ 4.40 ಕೋಟಿ ಲಾಭ ಗಳಿಸಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ತಿಳಿಸಿದರು.
ಶನಿವಾರ ತಾಲೂಕು ರೈತಭವನದಲ್ಲಿ ಆಯೋಜಿಸಿದ್ದ ಷೇರುದಾರರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, 1939ರಲ್ಲಿ ಒಂಬತ್ತು ಷೇರುದಾರರನ್ನು ಒಳಗೊಂಡು ಆರಂಭವಾದ ಮ್ಯಾಮ್ಕೋಸ್ ಪ್ರಸ್ತುತ 29862 ಷೇರುದಾರರನ್ನು ಹೊಂದಿದೆ ಎಂದರು.
ತಾಲೂಕಿಗೆ ಗೋದಾಮು ನಿರ್ಮಿಸಲು ನಿವೇಶನ ಖರೀದಿಸಿದ್ದು ಕಟ್ಟಡ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು.
ಕೃಷಿಕಾರ್ಮಿಕರ ಹಾಗೂ ರೈತರ ಕುಟುಂಬಗಳಿಗೆ ಆರೋಗ್ಯ, ಶೈಕ್ಷಣಿಕ ಸೌಲಭ್ಯಕ್ಕೆ ಸಹಕಾರ ನೀಡಲಾಗುತ್ತಿದೆ. ಅಡಕೆ ಜತೆಗೆ ಕಾಳುಮೆಣಸಿನ ಮಾರಾಟ ಕೇಂದ್ರ ಸ್ಥಾಪಿಸಲಾಗುವುದು. ಗುಂಪುವಿಮಾ ಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.
ರೈತ ನೆಮ್ಮಾರ್ ಪುಟ್ಟಯ್ಯ ಹೆಗಡೆ ಮಾತನಾಡಿ, ರೈತರ ಕೂಗು ಯಾರಿಗೂ ಕೇಳುವುದಿಲ್ಲ. ಸಂಸ್ಥೆ ರೈತರ ಪರವಾಗಿ ನಿಂತು ಎಲೆಚುಕ್ಕಿ ರೋಗ ನಿಯಂತ್ರಣ ಸಮಸ್ಯೆಗೆ ಪರಿಹಾರ ನೀಡಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.
ಅಡ್ಡಗದ್ದೆ ರೈತ ಜಿ.ಎಂ.ನಾಗೇಶ್ ಮಾತನಾಡಿ, ಸ್ಥಳೀಯ ಅಡಕೆ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಲಕ್ಷಗಟ್ಟಲೆ ಸಂಬಳ ಪಡೆಯುವ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಸಂಸ್ಥೆ ಕೃಷಿಕರ ಪರವಾಗಿ ನಿಂತು ತಜ್ಞರನ್ನು ಸಂಪರ್ಕಿಸಿ ಎಲೆಚುಕ್ಕಿ ರೋಗದ ಕುರಿತು ತುರ್ತುಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಳೆವಿಮೆ ಪಡೆಯಲು, ಕೃಷಿಕಾರ್ಮಿಕರಿಗೆ ಆರೋಗ್ಯ ವಿಮೆ ದೊರಕಲು ಸಂಸ್ಥೆ ಸಹಕಾರ ನೀಡಬೇಕು. ಪಾರಂಪರಿಕ ಬೆಳೆಯಾದ ಅಡಕೆ ತೋಟದ ವಿಸ್ತರಣೆ ಹೆಚ್ಚಾಗುತ್ತಿದೆ. ಆದರೆ ತಾಲೂಕಿನ ಸಣ್ಣಹಿಡುವಳಿದಾರರಿಗೆ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ರೈತರು ದೂರು ಹೇಳಿದರು.
ಸಂಸ್ಥೆ ಉಪಾಧ್ಯಕ್ಷ ಮಹೇಶ್ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸ್ಥೆ ಅವಿತರವಾಗಿ ಶ್ರಮಿಸುತ್ತದೆ ಎಂದರು.
ಸಂಸ್ಥೆ ನಿರ್ದೇಶಕರಾದ ಟಿ.ಕೆ.ಪರಾಶರ, ಸುರೇಶ್ಚಂದ್ರ, ಬಿ.ಸಿ.ನರೇಂದ್ರ, ಬಡಿಯಣ್ಣ, ಕೀರ್ತಿ, ವಿಜಯಲಕ್ಷ್ಮೀ, ಈಶ್ವರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಚ್ಚೋಡಿ ಶ್ರೀನಿವಾಸ್, ಮ್ಯಾಮ್ಕೋಸ್ ಸಂಸ್ಥೆ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಕಾಂತ್ ಬರ್ವೆ ಇದ್ದರು.