

ಅರಕಲಗೂಡು: ವೀರಶೈವ-ಲಿಂಗಾಯತ ಜನೋಪಯೋಗಿ ಸೌಹಾರ್ದ ಸಹಕಾರಿ ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ 4.45 ಲಕ್ಷ ರೂ. ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎನ್.ರವಿಕುಮಾರ್ ತಿಳಿಸಿದರು.
ಪಟ್ಟಣದ ಶ್ರೀಗುರು ವಿಜಯಸಿದ್ದ ಶಿವದೇವ ಮಂಗಳ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರಿಗೆ ನೀಡಿರುವ 2 ಕೋಟಿ 91 ಸಾವಿರ ರೂ. ಸಾಲದಲ್ಲಿ 1.21 ಕೋಟಿ ರೂ. ಮರುಪಾವತಿಯಾಗಿದೆ. 12.78 ಲಕ್ಷ ರೂ. ಸಾಲದ ಮೇಲಿನ ಬಡ್ಡಿ ಹಾಗೂ 22 ಸಾವಿರ ರೂ. ಠೇವಣಿ ಮೇಲಿನ ಬಡ್ಡಿ ರೂಪದಲ್ಲಿ ವಸೂಲಿಯಾಗಿದೆ. ಮಹಿಳೆಯರ ಸ್ವಾವಲಂಬನೆಗೆ ಸಂಘ ಒತ್ತು ನೀಡಿದ್ದು, ಕಡಿಮೆ ಬಡ್ಡಿ ದರದಲ್ಲಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ವೈಯಕ್ತಿಕ ಸಾಲದ ಯೋಜನೆಯಡಿ 40 ಲಕ್ಷ ರೂ. ಸಾಲ ನೀಡಲಾಗಿದೆ. ಸದ್ಯಕ್ಕೆ 9 ಸಂಘಗಳಿಗೆ ಸಾಲ ನೀಡಿದ್ದ ಈ ಸಲ 14 ಸಂಘಗಳಿಗೆ ಸಾಲ ಸೌಲಭ್ಯ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಶಶಿಕಲಾ ವಾರ್ಷಿಕ ವರದಿ ಮಂಡಿಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ಸಂಘದ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಪಾಲರಾಜ್, ಸಂಘದ ಉಪಾಧ್ಯಕ್ಷ ಬೆಮ್ಮತ್ತಿ ಲೋಕೇಶ್, ನಿರ್ದೇಶಕರಾದ ವೀರೇಶ್, ಸುಂದರೇಶ್, ವಿರೂಪಾಕ್ಷ, ಮಹದೇವು, ವಾಗೀಶ್ ಇತರರು ಇದ್ದರು. ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ಯೋಗೇಶ್, ಮಂಜುಳಮ್ಮ, ಕೆಂಚಪ್ಪ, ಮಾಗೋಡಿನ ಮಹಿಳಾ ಸ್ವ ಸಹಾಯ ಸಂಘ ಸೇರಿದಂತೆ 16 ಸಂಘಗಳ ಉತ್ತಮ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು.